ಶ್ರಮಿಕ ವರ್ಗದ ಕೊಡುಗೆಯನ್ನು ಸ್ಮರಿಸೋಣ

0
labour day
Spread the love

`ದುಡಿಮೆಯೇ ದುಡ್ಡಿನ ತಾಯಿ’ ಇದು ಒಂದು ಜನಪ್ರಿಯ ಗಾದೆ. ಗಾದೆಗಳು ವೇದಗಳಿಗೆ ಸಮ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಹೀಗಾಗಿ ದುಡಿಮೆ ಅಥವಾ ದೈಹಿಕ ಶ್ರಮ ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಸುತ್ತದೆ. `ಕೂತು ಉಣ್ಣುವವನಿಗೆ ಕುಡಿಕೆ ಹೊನ್ನೂ ಸಾಲದು’ ಎಂಬಂತೆ ಇರುವ ಆಸ್ತಿ ಕರಗಿದ ಮೇಲೆ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ಕಷ್ಟಪಟ್ಟರೆ ಸುಖವಿದೆ ಎಂಬುದು ಈ ಗಾದೆಯ ಆಶಯ, ಕೆಲಸ ಮಾಡುವ ಕಾರ್ಮಿಕರಿಗೆ ಅನ್ವಯಿಸುತ್ತದೆ.

Advertisement

ಈಗಿನ ಯಾಂತ್ರಿಕ ಯುಗದಲ್ಲೂ ದುಡಿಮೆಯ ಮಹತ್ವ ಕಡಿಮೆಯಾಗಿಲ್ಲ ಹಾಗಾಗಿ ಕಾರ್ಮಿಕರ ಕೊಡುಗೆಗೆ ಗೌರವ ಸಲ್ಲಿಸಲು ಮತ್ತು ಸಾಮಾಜಿಕ ಆರ್ಥಿಕ ಭದ್ರತೆ ಒದಗಿಸಲು ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಪ್ರತಿ ವರ್ಷ ಮೇ 01ರಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ.

ಈ ದಿನವನ್ನು ಕಾರ್ಮಿಕ ಸಮುದಾಯಗಳ ಕೊಡುಗೆಗೆ ಸ್ಪಂದಿಸುವ ಜೊತೆಗೆ ಇನ್ನಷ್ಟು ಉದ್ಯೋಗಾವಕಾಶ ಸೃಷ್ಟಿಸಲು, ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು, ಸಾಮಾಜಿಕ ರಕ್ಷಣೆಯನ್ನು ನೀಡಲು ಮತ್ತು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸಹಾಯ ಮಾಡುವ ಉದ್ದೇಶದಿಂದಲೂ ಆಚರಣೆಯನ್ನು ಮಾಡಲಾಗುತ್ತದೆ.

ಅದ್ಭುತ ಹೋರಾಟ ಫಲವಾಗಿ ಕಾರ್ಮಿಕ ದಿನಾಚರಣೆ ಜಾರಿಗೆ ಬಂದಿತು. ಈ ಹಿಂದೆ ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886ರಲ್ಲಿ, ದಿನದ 15 ಗಂಟೆಗಳ ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ತರಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಹೋರಾಟ ಮಾಡುತ್ತಿದ್ದರು. ಈ ಹೋರಾಟವು ತೀವ್ರ ಸ್ವರೂಪ ಪಡೆದಿದ್ದರಿಂದ ಇದನ್ನು ಹತ್ತಿಕ್ಕುವದಕ್ಕಾಗಿ ಮೇ 4ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಇದರ ಫಲವಾಗಿ ಅಂದರೆ 1916ರಲ್ಲಿ ಅಮೆರಿಕ ಸರ್ಕಾರ 8 ಗಂಟೆಗಳ ಕೆಲಸದ ಸಮಯವನ್ನು ಆದೇಶ ಮಾಡಿತು.

ಭಾರತದಲ್ಲಿ 1923ರ ಮೇ 1ರಂದು ‘ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್’ ಸ್ಥಾಪನೆಗೊಂಡ ದಿನದಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಆ ಸಮಯದಲ್ಲಿ ಇದನ್ನು ‘ಮದ್ರಾಸ್ ಡೇ’ ಎಂದು ಕರೆಯಲಾಗುತ್ತಿತು. ಭಾರತದಲ್ಲಿ 1927ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೊಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರು. 1928ರಿಂದ 1934ರವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದವು. ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು.

1960ರಲ್ಲಿ ಬಾಂಬೆ ರಾಜ್ಯವನ್ನು ವಿಭಜಿಸಿ ಮಹಾರಾಷ್ಟ್ರ ಮತ್ತು ಗುಜರಾತ್ ಎಂಬ ಎರಡು ರಾಜ್ಯಗಳನ್ನು ರಚಿಸಲು ಭಾರತದಲ್ಲಿ ದಿನದ ಮತ್ತೊಂದು ಮಹತ್ವವಿದೆ ಮತ್ತು ಅದರಂತೆ ಎರಡೂ ರಾಜ್ಯಗಳು ಈ ದಿನವನ್ನು ಆಚರಿಸುತ್ತವೆ.

ಕೆಲಸದ ಸ್ಥಳದಲ್ಲಿ ಕಾರ್ಮಿಕರು ಕಠಿಣ ಪರಿಶ್ರಮ ಹಾಕುತ್ತಾರೆ. ಕೆಲಸದ ದಕ್ಷತೆ ಮತ್ತು ಭವಿಷ್ಯದ ಬೆಳವಣಿಗೆಗಳನ್ನು ಸುಧಾರಿಸಲು ಅವರು ಅದ್ಭುತವಾದ ಆಲೋಚನೆಗಳನ್ನು ಹೊಂದಿದ್ದಾರೆ. ಈ ದಿನವು ಅವರ ನಿರ್ವಹಣೆ ಮತ್ತು ಸಮಾಜದಿಂದ ಅವರ ನವೀನ ಆಲೋಚನೆಗಳನ್ನು ಕೇಳಲು, ಮೌಲ್ಯೀಕರಿಸಲು ಅವಕಾಶವನ್ನು ನೀಡುತ್ತದೆ. ಅವರು ಕೇವಲ ಕಾರ್ಮಿಕರ ಟ್ಯಾಗ್‌ನೊಂದಿಗೆ ಮುದ್ರೆಯೊತ್ತುವುದಿಲ್ಲ ಆದರೆ ಭಾಗವಹಿಸುವಿಕೆಯಿಂದ ನಿರ್ವಹಣೆಯ ಭಾಗವಾಗುತ್ತಾರೆ.

ಒಟ್ಟಾರೆಯಾಗಿ ಈ ದಿನ ಕಾರ್ಮಿಕರನ್ನು ಪ್ರೋತ್ಸಾಹಿಸುವ ದಿನವಾಗಿದೆ. ಈ ದಿನವು ಕೇವಲ ಒಂದು ದಿನದ ಆಚರಣೆಗೆ ಮಾತ್ರವಲ್ಲ, ಗುರಿಗಳನ್ನು ಅತ್ಯುತ್ತಮವಾಗಿಸಲು ಮತ್ತು ಅಭ್ಯಾಸಗಳನ್ನು ಸುಧಾರಿಸಲು ಇಡೀ ವರ್ಷ ಅವರನ್ನು ಚೆನ್ನಾಗಿ ಪರಿಗಣಿಸುತ್ತದೆ ಎಂದು ನಮಗೆ ನೆನಪಿಸುತ್ತದೆ. ರೈತರು, ಯೋಧರು, ಕಾರ್ಮಿಕರು ನಮ್ಮ ಪ್ರಾಣವಾಯು. ಇವರಿಲ್ಲದೆ ನಮ್ಮ ಬದುಕಿಲ್ಲ. ಮಾಲೀಕ ಕೇಂದ್ರಿತ ಆರ್ಥಿಕತೆಯಿಂದಾಗಿ ಕಾರ್ಮಿಕರ ಬದುಕು ಅವಸಾನದ ಹಾದಿಯಲ್ಲಿದೆ. ಕಾರ್ಮಿಕ ಕೇಂದ್ರಿತ ಆರ್ಥಿಕತೆ ಮಾತ್ರ ಅವರನ್ನು ಮತ್ತು ನಮ್ಮನ್ನು ಉಳಿಸಬಹುದು. ಆದ್ದರಿಂದ ಎಲ್ಲರಿಗೂ ‘ವಿಶ್ವ ಕಾರ್ಮಿಕ ದಿನಾಚರಣೆ’ಯ ಶುಭಾಶಯಗಳು.
– ಬಸವರಾಜ ಎಮ್.ಯರಗುಪ್ಪಿ.
ಬಿಆರ್‌ಪಿ, ಶಿರಹಟ್ಟಿ.

yaraguppi


Spread the love

LEAVE A REPLY

Please enter your comment!
Please enter your name here