HomeArt and Literatureಗಡ್ಡಿ ಬಸವೇಶ್ವರನ ಕೃಪೆಗೆ ಪಾತ್ರರಾಗೋಣ ಬನ್ನಿ

ಗಡ್ಡಿ ಬಸವೇಶ್ವರನ ಕೃಪೆಗೆ ಪಾತ್ರರಾಗೋಣ ಬನ್ನಿ

For Dai;y Updates Join Our whatsapp Group

Spread the love

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸಾಸರವಾಡ ಗ್ರಾಮವು ಗದಗ ಜಿಲ್ಲೆಯಿಂದ ಸುಮಾರು 70-75 ಕಿಮೀ ದೂರದಲ್ಲಿದ್ದು, ರಮ್ಯವಾದ ಅರಣ್ಯ ಸಂಪತ್ತಿನಿಂದ ಕಂಗೊಳಿಸುತ್ತಿದೆ. ಇದು ಹೊಲ-ಗದ್ದೆಗಳು ರಕ್ಷಣೆಗಾಗಿ ಮುಳ್ಳಿನ ಬೇಲಿಗಳನ್ನು ಹೊಂದಿದಂತೆ ತನ್ನ ರಕ್ಷಣೆಗೆ ನಿಸರ್ಗದತ್ತವಾಗಿ ಸುತ್ತಲೂ ವಿಸ್ತಾರವಾದ ತುಂಗಭದ್ರೆಯನ್ನು ಹೊಂದಿ ನಡುಗಡ್ಡೆ ಪ್ರದೇಶವಾಗಿದೆ. ಇಲ್ಲಿ ಅನೇಕ ಋಷಿ-ಮುನಿಗಳು ತಪಗೈದ ನಂಬಿಕೆ ಇಲ್ಲಿನ ಭಕ್ತಾದಿಗಳಿಗಿದೆ.

ಸಾಸರವಾಡ ಗ್ರಾಮದಲ್ಲಿನ ಕಲ್ಮೇಶ್ವರ ದೇವಾಲಯದ ಎದುರಿಗಿರುವ ಒಂದು ದಾನಶಾಸನವನ್ನು ಅಧ್ಯಯನ ಮಾಡಿದ ಎಂ.ಎಂ. ಕಲಬುರಗಿ ಅವರ ಪ್ರಕಾರ ಕಲ್ಮೇಶ್ವರ ದೇವಾಲಯದ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದದ್ದು ಎಂದು ತಿಳಿದುಬರುತ್ತದೆ. ಇದರ ಪ್ರಕಾರ ಸಾಸರವಾಡ ಗ್ರಾಮದಲ್ಲಿ ಮಸಣಯ್ಯ ನಾಯಕ ಎಂಬ ವ್ಯಕ್ತಿ ಇಂದ್ರಕೇಶಿ ಎಂಬ ರಾಜನ ಆಜ್ಞೆಯ ಮೇರೆಗೆ ಉತ್ತರೇಶ್ವರ ದೇವಾಲಯ ನಿರ್ಮಾಣ ಮಾಡಿ ಕಲ್ಯಾಣಿ ಚಾಲುಕ್ಯರ ಒಂದನೇ ಸೋಮೇಶ್ವರನಿಗೆ ದಾನ ನೀಡಿದನೆಂದು ಈ ಶಾಸನ ತಿಳಿಸಿದ್ದು, ಗ್ರಾಮದ ಹೆಸರು ಮೊದಲಿಗೆ ಸಾಸಿರರಾವೆ ಎಂಬುದಾಗಿದ್ದು, ಕಾಲಕ್ರಮೇಣ ಸಾಸರವಾಡವಾಗಿದೆ ಎಂದು ತಿಳಿದುಬರುತ್ತದೆ. ಇದರೊಂದಿಗೆ ಮತ್ತೊಂದು ಶಾಸನವಿದ್ದು, ಅದು ಅಧ್ಯಯನಕ್ಕೆ ಒಳಪಟ್ಟಿದೆಯೋ ಇಲ್ಲವೋ ತಿಳಿದಿಲ್ಲ.

ಈ ನಡುಗಡ್ಡೆ ಪ್ರದೇಶದಲ್ಲಿ ಬಿದಿರು, ಆಲದ ಮರ, ಹುಣಸೆ ಮರ, ಹತ್ತಿ ಮರ, ನೇರಳೆ ಮರ ಹಿಗೇ ಹತ್ತು ಹಲವಾರು ಬಗೆಯ 150-200 ವರ್ಷಗಳಿಗೂ ಹಳೆಯದಾದ ಮರಗಳನ್ನು ಒಳಗೊಂಡಿದೆ. ಇಲ್ಲಿ ಟಿಟಿಟ್ರಾಂ, ಗೊರವಂಕ, ಬೆಳ್ಳಕ್ಕಿ, ನೀರುಬಕ, ಕಪ್ಪುತಲೆ, ಕಂಬರಕ, ಬೂದುಬಕ, ಕೊಳದಬಕ, ಕೆನ್ನೀಲಿಬಕ, ಇರುಳಬಕ, ಬಾವಲಿಗಳು, ನೀರುನಾಯಿ, ಮೊಸಳೆಗಳು ಹೀಗೆ ಅನೇಕಾನೇಕ ಜೀವಸಂಕುಲಗಳು ಸ್ವಚ್ಛಂದವಾಗಿ ವಿಹರಿಸುವುದನ್ನು ನಾವು ಕಾಣಬಹುದು.

ಈ ನಡುಗಡ್ಡೆ ಪ್ರದೇಶದಲ್ಲಿ ಬಸವೇಶ್ವರ ಹಾಗೂ ವೀರಭದ್ರೇಶ್ವರ ದೇವಾಲಯ ಇದ್ದು, ಇವೆರಡೂ ದೇವರ ಜಾತ್ರೆ ವರ್ಷಕ್ಕೊಮ್ಮೆ ಒಟ್ಟಿಗೆ ನಡೆಯುತ್ತದೆ. ಈ ನಡುಗಡ್ಡೆಗೆ ಹೋಗಬೇಕಾದರೆ ಮೊದಲಿಗೆ ನದಿಯಲ್ಲಿ ನಡೆದುಕೊಂಡೇ ಹೋಗಬೇಕಾಗಿತ್ತು. ಆದರೆ ಕಳೆದ ವರ್ಷಗಳಿಂದ ಸೇತುವೆ ನಿರ್ಮಾಣವಾಗಿದ್ದು, ಸದಾಕಾಲ ಯಾವಾಗಲೂ ಸಂಚರಿಸಲು ಅನುಕೂಲವಾಗಿದೆ.

ಇಲ್ಲಿಗೆ ಸಾಗರೋಪಾದಿಯಲ್ಲಿ ಭಕ್ತ ಸಂಕುಲ ಹರಿದು ಬಂದು ವಿಶಾಲ ತುಂಗಭದ್ರೆಯಲಿ ಮಿಂದು ಆ ಗ್ರಾಮಾದಿದೈವ ಶಂಕರಲಿಂಗ ಗಡ್ಡಿ ಬಸವೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ. ಅದೇ ರೀತಿ ಈ ವರ್ಷ ಮಾರ್ಚ್ 7ರಂದು ಪುಷ್ಪ ರಥೋತ್ಸವ, ಮಾ.8ರಂದು ದೊಡ್ಡ ರಥೋತ್ಸವ, ಮಾ.9ರಂದು ಅಗ್ನಿ ಕುಂಡ ಮಹೋತ್ಸವಗಳು ನೆರವೇರಲಿವೆ.

– ಜಿ.ಎನ್. ಪಾಟೀಲ, ಸಾಸರವಾಡ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!