ವಿಜಯಸಾಕ್ಷಿ ಸುದ್ದಿ, ರೋಣ: ಮತಗಳ ಕಳ್ಳತನದಿಂದ, ಅಧಿಕಾರ ನಡೆಸುವ ಪಕ್ಷಗಳಿಂದ ದೇಶದ ಪ್ರಜಾಪ್ರಭುತ್ವ ಉಳಿಯಲು ಸಾದ್ಯವಿಲ್ಲ. ಹೀಗಾಗಿ, ಕಾಂಗ್ರೆಸ್ ಪಕ್ಷ `ಮತ ಕಳ್ಳತನ ನಿಲ್ಲಲಿ – ಪ್ರಜಾಪ್ರಭುತ್ವ ಉಳಿಯಲಿ’ ಎಂಬ ಘೋಷವಾಕ್ಯದೊಂದಿಗೆ ಸಹಿ ಅಭಿಯಾನ ಹಮ್ಮಿಕೊಂಡಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಬುಧವಾರ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನ ನಮಗೆ ಮತದಾನದ ಹಕ್ಕನ್ನು ನೀಡಿದೆ. ವಿಪರ್ಯಾಸವೆಂದರೆ, ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಹುನ್ನಾರ ನಡೆದಿದೆ. ಮತಗಳನ್ನೇ ಕಳ್ಳತನ ಮಾಡಿದರೆ ಸಂವಿಧಾನ ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರು ಮತಕ್ಷೇತ್ರದ ಪ್ರತಿ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹ ಮಾಡಬೇಕು ಎಂದರು.
ಪ್ರತಿ ಕುಟುಂಬಗಳಲ್ಲಿನ ಮತದಾರರ ಹೆಸರು, ಆಧಾರ್ ಕಾರ್ಡ್ ಸಂಖ್ಯೆ, ದೂರವಾಣಿ ಸಂಖ್ಯೆ ಹಾಗೂ ಅವರ ಸಹಿಯನ್ನು ಪಡೆದುಕೊಳ್ಳುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಮತಗಳನ್ನು ಯಾವ ರಿತಿಯಲ್ಲಿ ಕಳ್ಳತನ ಮಾಡುತ್ತಿದ್ದಾರೆ ಎಂದು ಜನರಿಗೆ ತಿಳಿಸುವ ಜೊತೆಗೆ ಜಾಗೃತಿಯನ್ನು ಮೂಡಿಸಬೇಕು. ರೋಣ ಮತಕ್ಷೇತ್ರದಲ್ಲಿ ಒಂದೇ ದಿನ ಎಲ್ಲ ವಾರ್ಡ್‌ಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಬೇಕು. ಪ್ರಜಾಪ್ರಭುತ್ವದ ಉಳಿವಿಗಾಗಿ ನಾವೆಲ್ಲರೂ ಸಿದ್ಧರಾಗಬೇಕಿದೆ ಎಂದರು.
ಐ.ಎಸ್. ಪಾಟೀಲ, ಅಕ್ಷಯ ಪಾಟೀಲ, ವೀರಣ್ಣ ಶೆಟ್ಟರ, ಶರಣಪ್ಪ ಬೆಟಗೇರಿ, ವಿ.ಆರ್. ಗುಡಿಸಾಗರ, ಎಸ್.ಎಸ್. ಸೋಂಪುರ, ಅಶೋಕ ಬಾಗಮಾರ, ಬಸವರಾಜ ನವಲಗುಂದ, ಪರಶುರಾಮ ಅಳಗವಾಡಿ, ದಶರಥ ಗಾಣಿಗೇರ, ಯಚ್ಛರಗೌಡ ಗೋವಿಂದಗೌಡ್ರ, ದುರ್ಗಪ್ಪ ಹಿರೇಮನಿ, ಮಂಜುಳಾ ಹುಲ್ಲಣ್ಣವರ, ಮಂಜುಳಾ ರೇವಡಿ, ನಾಜಬೇಗಂ ಯಲಿಗಾರ, ರೂಪಾ ಅಂಗಡಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನದ ಪ್ರಕರಣಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬಿಜೆಪಿಯವರು ಯಾವ ರೀತಿಯಲ್ಲಿ ಅಧಿಕಾರ ದಕ್ಕಿಸಿಕೊಂಡಿದ್ದಾರೆ ಎನ್ನುವುದನ್ನು ದೇಶದ ಜನರಿಗೆ ತಿಳಿಸುವ ಕೆಲಸವನ್ನು ಮಾಡಿದ್ದಾರೆ. ಮತದಾರರು ಜಾಗೃತರಾಗಿ ಮತದಾನದ ಪ್ರತಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.



