ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದು ಹೆಮ್ಮೆಯ ಸಂಗತಿ. ಸಾಧಕ ಮಹಿಳೆಯರನ್ನು ಸಮಾಜವು ಗುರುತಿಸಿ ಗೌರವಿಸಿದರೆ ಅವರಿಗೆ ನಾವು ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಅವರಂತೆಯೇ ನಾವೂ ಸಹಿತ ಸಾಧಕರಾಗಲು ಕ್ರಿಯಾಶೀಲರಾಗೋಣ ಎಂದು ಗದಗ ಜೇಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಸಂಘಟನೆಯ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.
ಅವರು ಗದುಗಿನ ಹಾಲಕೇರಿ ಮಠದ ಆವರಣದಲ್ಲಿ ಗದಗ ಜೇಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಸಂಘಟನೆಯಿಂದ ಜರುಗಿದ ಸಾಧಕ ಮಹಿಳೆಗೆ ಸನ್ಮಾನ ಕಾರ್ಯಕ್ರಮದಲ್ಲಿ ಜಯಶ್ರೀ ಉಗಲಾಟದ ಅವರನ್ನು ಸನ್ಮಾನಿಸಿ ಮಾತನಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗದಗ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಜಯಶ್ರೀ ಅವರು ಆಯ್ಕೆಯಾಗಿದ್ದು ನಮಗೆಲ್ಲ ಸಂತಸ ತಂದಿದೆ. ಇಂತಹ ಮಹಿಳೆಯರು ನಮಗೆ ಆದರ್ಶರು. ಪ್ರತಿಯೊಬ್ಬ ಮಹಿಳೆಯರು ಕುಟುಂಬ ನಿರ್ವಹಣೆಯ ಜೊತೆಗೆ ಸಾಮಾಜಿಕವಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಮಧು ಕರಬಿಷ್ಠಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಮುಖಿ ಕಾರ್ಯಗಳಿಂದ ನಾವು ಜನರ ಮನದಲ್ಲಿ ಇರುತ್ತೇವೆ. ಸಮಾಜ ಸೇವಕರನ್ನು ಸಮೂಹವು ಗುರುತಿಸಿ ಜವಾಬ್ದಾರಿಯುತ ಸ್ಥಾನ ನೀಡಿ ಗೌರವಿಸುತ್ತದೆ. ನಾವು ನಮ್ಮೊಂದಿಗೆ ಇತರರನ್ನು ಸಹಿತ ಇಂತಹ ಸಮಾಜಮುಖಿ ಕೆಲಸಗಳಿಗೆ ಜೊತೆಗೂಡಿಸಿಕೊಂಡು ಸಾಗಬೇಕು ಎಂದರು.
ಪ್ರಿಯಾಂಕಾ ಹಳ್ಳಿ ಮತ್ತು ರೇಖಾ ರೊಟ್ಟಿ ಪ್ರಾರ್ಥಿಸಿದರು. ನಿರ್ಮಲಾ ಪಾಟೀಲ ಸ್ವಾಗತಿಸಿದರು. ಅಶ್ವಿನಿ ಮಾದಗುಂಡಿ ನಿರೂಪಿಸಿದರು. ಸುಗ್ಗಲಾ ಯಳಮಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಾಧುರಿ ಮಾಳೆಕೊಪ್ಪ, ಶಶಿಕಲಾ ಮಾಲಿಪಾಟೀಲ, ಸುಷ್ಮಿತಾ ವೆರ್ಣೇಕರ, ಚಂದ್ರಕಲಾ ಸ್ಥಾವರಮಠ, ಶ್ರೀದೇವಿ ಮಹೇಂದ್ರಕರ, ವಿದ್ಯಾ ಶಿವನಗುತ್ತಿ, ಶೋಭಾ ಹಿರೇಮಠ, ಜಯಶ್ರೀ ಪಾಟೀಲ, ರೇಣುಕಾ ಅಮಾತ್ಯ, ವಿದ್ಯಾ ಗಂಜಿಹಾಳ, ಪದ್ಮಿನಿ ಮುಂತಾದವರು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯಶ್ರೀ ಉಗಲಾಟದ, ನಮ್ಮ ಸಾಧನೆಗೆ ನಿರಂತರ ಪ್ರಯತ್ನ, ಆತ್ಮೀಯರ ಸಹಕಾರ, ಕುಟುಂಬದವರ ಪ್ರೋತ್ಸಾಹದಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಅವಕಾಶ ಒದಗಿ ಬಂದಿತು. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸುವೆ ಎಂದರು.