ಬೆಂಗಳೂರಿನ ಬಹುತೇಕ ಮಳಿಗೆಗಳು ಸೇರಿದಂತೆ ವ್ಯಾಪಾರ ಕೇಂದ್ರಗಳು ಸೇಲ್‌ಗಳ ಪೈಪೋಟಿಯಲ್ಲಿ ತೊಡಗಿವೆ. ದೊಡ್ಡ ದೊಡ್ಡ ಮಾಲ್‌ಗಳು ನವವಧುವಿನಂತೆ ಕಂಗೊಳಿಸುತ್ತ ಶೃಂಗಾರಗೊಂಡಿವೆ. ಒಂದು ಕೊಂಡರೆ ಇನ್ನೊಂದು ಉಚಿತ, ಅಷ್ಟು ರಿಯಾಯಿತಿ ಇಷ್ಟು ರಿಯಾಯಿತಿ, ಅದು ಕೊಂಡರೆ ಇದು ಉಚಿತ ಎಂಬ ಟಿವಿ ಜಾಹೀರಾತು ಮತ್ತು ಬ್ಯಾನರ್‌ಗಳಿಂದ ಪ್ರಚಾರ ಮಾಡುತ್ತಿವೆ. ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ‍್ಯ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತೇವೆ.
ನಾವೆಲ್ಲರೂ ಭಾರತೀಯರು ಎಂದು ಜಾತಿ, ಮತ, ಭೇದವಿಲ್ಲದೆ ಸಂಭ್ರಮಿಸುವ ದಿನವಿದು. ಇಂದು 77 ವಸಂತಗಳನ್ನು ಪೂರೈಸಿ 78ನೇ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದೇವೆ. ಈ ದಿನದಂದು ದೇಶಭಕ್ತಿಯ ಹಾಡುಗಳು, ಭಾಷಣಗಳು, ಕಲೆ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಾರುವ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ. ನಾವೆಲ್ಲರೂ ಭಾರತೀಯರು ಧರ್ಮ, ಜಾತಿ, ಭಾಷೆ ಕುಲ-ಗೋತ್ರ, ಬಡವ, ಶ್ರೀಮಂತ, ವಿದ್ಯಾವಂತ, ಅವಿದ್ಯಾವಂತ ಎಂಬ ಭೇದವಿಲ್ಲದೇ ನಮ್ಮ ಭಾರತ ದೇಶವನ್ನು ಪ್ರತಿಯೊಬ್ಬ ಪ್ರಜೆಯೂ ಪ್ರೀತಿಸುತ್ತಾನೆ, ಪ್ರೀತಿಸಲೇಬೇಕು. ಏಕೆಂದರೆ ನಮ್ಮ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಸ್ವಾತಂತ್ರ‍್ಯ ಹೋರಾಟಗಾರರು ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ್ದಾರೆ.
ಸ್ವಾತಂತ್ರ‍್ಯನಂತರ ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಕೃಷಿ ವಿದ್ಯೆ, ಆರೋಗ್ಯ, ಕೈಗಾರಿಕೆ, ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಸಿನಿಮಾ, ಕ್ರೀಡೆ ಇತ್ಯಾದಿ ರಂಗದಲ್ಲಿ ನಮ್ಮ ದೇಶ ಮುಂದುವರೆದ ರಾಷ್ಟ್ರಗಳ ಶ್ರೇಣಿಯಲ್ಲಿ ಇದೆ. ಪ್ರಗತಿ ಪಥದಲ್ಲಿರುವ ಈ ದೇಶದ ಪ್ರಗತಿಯೇ ನಮ್ಮ ಪ್ರಗತಿ ಎಂಬ ಭಾವನೆ ಸದಾ ನಮ್ಮಲ್ಲಿರಬೇಕು. `ಸತ್ಯಮೇವ ಜಯತೇ’ ಇದು ನಮ್ಮ ರಾಷ್ಟ್ರೀಯ ಧ್ಯೇಯವಾಕ್ಯ. ಈ ಧ್ಯೇಯವಾಕ್ಯದ ಪರಿಪಾಲನೆ ಎಷ್ಟಾಗುತ್ತಿದೆ? ಸ್ವಾತಂತ್ರ‍್ಯ ಹೋರಾಟದಲ್ಲಿ ಅನೇಕ ಮಹಿಳೆಯರು ಕೂಡ ಹೋರಾಡಿದ್ದಾರೆ.
ದೇಶವನ್ನು ಗೌರವಿಸುವ ನಾವು ಮಹಿಳೆಯರನ್ನು ಗೌರವಿಸಬೇಕು. ತಾಯಿ ಎಂಬ ಗೌರವ, ಮಗಳೆಂಬ ವಾತ್ಸಲ್ಯ, ಅತ್ತೆ ಎಂಬ ಅಭಿಮಾನ, ಸೊಸೆ ಎಂಬ ಪ್ರೀತಿ ಸಹೋದರ ಸಹೋದರಿಯರ ಪ್ರೀತಿ-ಬಾಂಧವ್ಯ, ನಾವು ಭಾರತೀಯರು ಎಂಬ ಒಗ್ಗಟ್ಟು ಹಾಗೂ ಏಕತೆಯನ್ನು ಪ್ರದರ್ಶಿಸಬೇಕಾಗಿದೆ. ಸ್ವಾತಂತ್ರ‍್ಯ ದಿನಾಚರಣೆ ಎನ್ನುವುದು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಗಟ್ಟಿಗೊಳಿಸೋಣ, ಸ್ವಾತಂತ್ರ‍್ಯ ದಿನಾಚರಣೆಯನ್ನು ಎಲ್ಲರೂ ಸಡಗರ-ಸಂಭ್ರಮದಿAದ ಆಚರಿಸೋಣ.
– ವಿ.ಎಂ.ಎಸ್. ಗೋಪಿ.
ಬೆಂಗಳೂರು.