ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ವಿದ್ಯಾರ್ಥಿ ಸಮುದಾಯವನ್ನು ದಾರಿ ತಪ್ಪಿಸುತ್ತಿರುವ ಮಾದಕ ದ್ರವ್ಯ ವ್ಯಸನ ಯುವ ಜನಾಂಗದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡಿದೆ. ಯುವ ಜನಾಂಗ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆದ್ದರಿಂದ ವ್ಯಸನಮುಕ್ತ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ ಎಂದು ಶಿರಹಟ್ಟಿ ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.
ಅವರು ಶಿರಹಟ್ಟಿಯ ಎಫ್.ಎಮ್. ಡಬಾಲಿ ಪದವಿಪೂರ್ವ ಕಾಲೇಜಿನಲ್ಲಿ ಗದಗ ಜಿಲ್ಲಾ ಪೊಲೀಸ್ ಮತ್ತು ಶಿರಹಟ್ಟಿ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಮತ್ತು ಮಾದಕ ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶರೀರದ ನರಮಂಡಲದ ಮೇಲೆ ಈ ಮಾದಕ ವ್ಯಸನಗಳಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿ ವ್ಯಕ್ತಿಯು ಸಾವಿನ ದವಡೆಗೆ ದೂಡಲ್ಪಡುತ್ತಾನೆ. ವ್ಯಸನ ಮುಕ್ತ ಸಮಾಜ ನಮ್ಮೆಲ್ಲರ ಸಂಕಲ್ಪವಾಗಬೇಕು ಮತ್ತು ಪೊಲೀಸ್–ಪೌರರ ಸಹಭಾಗಿತ್ವ ಅಪರಾಧದ ಮೂಲ ದಮನ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಮಾತನಾಡಿ, ಮಾದಕ ದ್ರವ್ಯ ವ್ಯಸನ ಯುವ ಜನಾಂಗಕ್ಕೆ ಬಹಳಷ್ಟು ಅಪಾಯಕಾರಿಯಾಗಿದ್ದು, ಅವುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಮತ್ತು ಸೈಬರ್ ಅಪರಾಧಗಳ ಬಗ್ಗೆ ಅರಿವು ಹೊಂದುವುದರಿಂದ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸುರಕ್ಷಿತವಾಗಿ ಇಂಟರ್‌ನೆಟ್ ಬಳಕೆ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ಚವಡಿ, ಎನ್. ಹನುಮರೆಡ್ಡಿ, ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ್, ಎಫ್.ಎ. ಬಾಬುಖಾನವರ, ಪಿ.ವಿ. ಹೊಸೂರ, ನೀಲಕಾಂತ ಕಂಕನವಾಡ, ಸೋಮಶೇಖರ ರಾಮಗೇರಿ, ಮಲ್ಲಿಕಾರ್ಜುನ ವಡ್ಡರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



