ವಿಜಯಸಾಕ್ಷಿ ಸುದ್ದಿ, ಲಕ್ಷೇಮೇಶ್ವರ: ಪಟ್ಟಣದಲ್ಲಿ ನವೆಂಬರ್ 28ರಂದು ರಾಷ್ಟ್ರಮಾತೆ, ವೀರರಾಣಿ ಕಿತ್ತೂರ ಚೆನ್ನಮ್ಮನವರ 201ನೇ ವಿಜಯೋತ್ಸವ ಹಾಗೂ 247ನೇ ಜಯಂತ್ಯುತ್ಸವ ಕಾರ್ಯಕ್ರಮಾಚರಣೆಯ ಕುರಿತ ಪೂರ್ವಭಾವಿ ಸಭೆ ಲಕ್ಷೇಮೇಶ್ವರ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷೆ ಶಾರಕ್ಕಾ ಮಹಾಂತಶೆಟ್ಟರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಸಂತಾ ಹುಲ್ಲತ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಶ್ಮಿ ಕುಂಕೋದ ಮಾತನಾಡಿ, ವೀರರಾಣಿ ಕಿತ್ತೂರ ಚೆನ್ನಮ್ಮನ ವಿಜಯೋತ್ಸವ ಮತ್ತು ಜಯಂತ್ಯುತ್ಸವವನ್ನು ಲಕ್ಷೇಮೇಶ್ವರ ಪಟ್ಟಣದಲ್ಲಿ ಅತ್ಯಂತ ವಿಜೃಂಭಣೆಯಾಗಿ, ಅರ್ಥಪೂರ್ಣವಾಗಿ ಆಚರಿಸೋಣ. ಸಮಾಜ ಬಾಂಧವರು ನಮ್ಮೊಳಗಿನ ಹಮ್ಮು-ಬಿಮ್ಮು, ವೈಮನಸ್ಸು, ಒಣ ಪ್ರತಿಷ್ಠೆ ಬದಗೊತ್ತಿ ನಾವೆಲ್ಲ ಪರಸ್ಪರ ಸಹೋದರತೆಯ ಭಾವನೆಯೊಂದಿಗೆ ಭಾಗವಹಿಸಬೇಕು ಎಂದರು.
ಲಕ್ಷೇಮೇಶ್ವರ ತಾಲ್ಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ಕೂಡಲ ಮತ್ತು ಹರಿಹರ ಪೀಠದ ಜಗದ್ಗುರುಗಳ ಸಾನ್ನಿಧ್ಯ ಮತ್ತು ಸಮಾಜದ ಹಿರಿಯರು ಸಮಾರಂಭ ನಡೆಸಲು ಒಮ್ಮತದಿಂದ ನಿರ್ಣಯಿಸಿದ್ದಾರೆ. ಸಮಾಜ ಬಾಂಧವರು ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಬೇಕು ಎಂದರು.
ಈ ವೇಳೆ ಲಕ್ಷೇಮೇಶ್ವರ ನಗರ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಕಾವ್ಯಾ ಬಹದ್ದೂರದೇಸಾಯಿ, ಉಪಾಧ್ಯಕ್ಷರಾಗಿ ಪೂರ್ಣಿಮಾ ಪಾಟೀಲ, ಕಾರ್ಯದರ್ಶಿಯಾಗಿ ಶೈಲಾ ಆದಿ ಅವರನ್ನು ನೇಮಕ ಮಾಡಲಾಯಿತು. ವಿಜಯಲಕ್ಷೀಮೇಶ್ವರ ಬಾಳಿಕಾಯಿ, ಅನ್ನಪೂರ್ಣ ಮಹಾಂತಶೆಟ್ಟರ, ಜಯಶ್ರೀ ಮೆಳ್ಳಿಗೇರಿ, ಗೂರುಬಾಯಿ ಹುಲಸೂರ, ಸರಸ್ವತಿ ಹೊನ್ನೇಗೌಡ್ರ, ಚೇತನಾ ಹೊಗೆಸೊಪ್ಪಿನ, ಗಿರಿಜಕ್ಕ ಮೆಕ್ಕಿ, ಕವಿತಾ ಅರಳಿಹಳ್ಳಿ, ಶಂಕ್ರಣ್ಣ ಬ್ಯಾಡಗಿ, ಮಲ್ಲಿಕಾರ್ಜುನ ನಿರಾಲೋಟಿ, ಚಂದ್ರು ಮಾಗಡಿ ಮುಂತಾದವರಿದ್ದರು.


