ವಿಜಯಸಾಕ್ಷಿ ಸುದ್ದಿ, ಗದಗ: ಭಾರತವು ಪೋಲಿಯೋ ಮುಕ್ತ ದೇಶವಾಗಿದೆ. ಆದರೆ, ನೆರೆ ದೇಶಗಳಲ್ಲಿ ಪೋಲಿಯೋ ಇನ್ನೂ ಜೀವಂತ ಇರುವುದರಿಂದ ನಮ್ಮ ದೇಶದಲ್ಲಿಯೂ ಮತ್ತೆ ಮರುಕಳಿಸುವ ಸಾಧ್ಯತೆಯಿದೆ. ನಮ್ಮ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ಮಕ್ಕಳನ್ನು ರಕ್ಷಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ದುಂಡಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಜರುಗಿದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿಗೆ ಎರಡು ಪೋಲಿಯೋ ಹನಿ ಹಾಕಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪೋಲಿಯೋ ವಿರುದ್ಧ ಭಾರತವು ಸಾಧಿಸಿರುವ ಗೆಲುವನ್ನು ನಾವೆಲ್ಲರೂ ಮುಂದುವರಿಸಲು ಕೈಜೋಡಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿಯಲ್ಲಿ ನಮ್ಮ ಜಿಲ್ಲೆಯ ಎಲ್ಲಾ ತಾಯಂದಿರು ಐದು ವರ್ಷದೊಳಗಿನ ಮಕ್ಕಳನ್ನು ಕರೆದುಕೊಂಡು ಬಂದು ತಪ್ಪದೇ ಪೋಲಿಯೋ ಹನಿ ಹಾಕಿಸಿಕೊಳ್ಳಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ಕೆ.ಎಸ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ. ಕರಿಗೌಡ್ರ, ರೋಟರಿ ಕ್ಲಬ್ ಅಧ್ಯಕ್ಷ ಡಾ. ರಾಜೇಂದ್ರ, ಜಿಲ್ಲಾ ಐ.ಎಮ್.ಎ ಅಧ್ಯಕ್ಷ ಡಾ. ಶ್ರೀಧರ ಕುರಡಗಿ, ಡಾ. ಅರುಂಧತಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ, ಡಾ. ಶೇಖರ ಸಜ್ಜನ, ರೂಪಸೇನ ಚವ್ಹಾಣ, ಸುರೇಶ್ ಕುಂಬಾರ, ರಾಜೇಂದ್ರ ಗಡಾದ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೆಶಕಿ ಹಾಗೂ ರಾಜ್ಯ ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿ ಡಾ. ನಂದಿನಿ ಬಿ ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವು ದೇಶಾದ್ಯಂತ ಮತ್ತು ರಾಜ್ಯಾದ್ಯಂತ ಅಭಿಯಾನದ ರೂಪದಲ್ಲಿ ಹಮ್ಮಿಕೊಂಡಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕಲಾಗುತ್ತಿದೆ. ಶಾಶ್ವತ ಅಂಗವಿಕಲತೆ ತರಬಲ್ಲ ಪೋಲಿಯೋವನ್ನು ಲಸಿಕೆಯ ಮೂಲಕ ಪ್ರತಿರೋಧಿಸೋಣ ಎಂದು ತಿಳಿಸಿದರು.



