ಸ್ಯಾಂಡಲ್ ವುಡ್ ನಟಿ ರಮ್ಯಾ ಅವರು ನಟ ದರ್ಶನ್ ಅಭಿಮಾನಿಗಳು ಮೇಲೆ ಸಖತ್ ಗರಂ ಆಗಿದ್ದಾರೆ. ತಮಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಕಾಮೆಂಟ್ ಮಾಡಿದ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ತಿರುಗಿ ಬಿದ್ದಿದ್ದಾರೆ. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ನಟಿ ರಮ್ಯಾ ಪೋಸ್ಟ್ ಮಾಡಿದ್ದು ಇದಕ್ಕೆ ದರ್ಶನ್ ಅಭಿಮಾನಿಗಳು ರಾಂಗ್ ಆಗಿದ್ದಾರೆ. ಹೀಗಾಗಿ ರಮ್ಯಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಷಯ ಸಖತ್ ಚರ್ಚೆಗೆ ಕಾರಣವಾಗಿದ್ದು ಇದು ನಟ ಪ್ರಥಮ್ ನಟಿ ರಮ್ಯಾ ಪರ ನಿಂತಿದ್ದಾರೆ.
ಈ ವಿವಾದದ ಬಗ್ಗೆ ಬಿಗ್ ಬಾಸ್ʼ ಸ್ಪರ್ಧಿ ಹಾಗೂ ನಟ ಪ್ರಥಮ್ ಧ್ವನಿ ಎತ್ತಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಪ್ರಥಮ್, “ನಾನು ರಮ್ಯಾ ಮೇಡಂ ಘನತೆಗೆ ಬೆಂಬಲ ನೀಡುತ್ತೇನೆ. ಎಲ್ಲರೂ ನಟಿ ರಮ್ಯ ಪರ ನಿಲ್ಲೋಣ. ಈಗಲೂ ನಾವು ರಮ್ಯಾರವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು. ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ. ಇಷ್ಟೆಲ್ಲಾ ಆದರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರ್ಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ ಎಂದು ಪ್ರಥಮ್ ಬರೆದುಕೊಂಡಿದ್ದಾರೆ.
ಇನ್ನೂ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ‘ಈ ರೀತಿ ಅವಹೇಳನಕಾರಿ ಪದಗಳನ್ನು ಉಪಯೋಗಿಸಿ, ಹೆಣ್ಣಿನ ಮಾನಹಾನಿ ಮಾಡುವುದು ದೊಡ್ಡ ಅಪರಾಧ. ಇದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಮಗೆ ದೂರು ಕೂಡ ಬಂದಿದೆ. ಹಾಗಾಗಿ ನಾವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಅಶ್ಲೀಲವಾದ ಕಮೆಂಟ್ಗಳನ್ನು ಮಾಡುತ್ತಿರುವುದು ಕಾನೂನಿನ ಅಡಿಯಲ್ಲಿ ದೊಡ್ಡ ಅಪರಾಧ. ನಾವು ಪೊಲೀಸ್ ಆಯುಕ್ತರಿಗೆ ಪತ್ರವನ್ನು ಬರೆದಿದ್ದೇವೆ’ ಎಂದಿದ್ದಾರೆ.
‘ಕಾನೂನು ಇದೆ, ನ್ಯಾಯಾಲಯ ಇದೆ. ತಪ್ಪು ಸಾಬೀತಾದರೆ 7 ವರ್ಷ ಜೈಲು ಶಿಕ್ಷೆ ಆಗುತ್ತದೆ. ಇದು ನಿಮಗೆ ನೆನಪಿರಲಿ. ನೀವು ಕಮೆಂಟ್ ಮಾಡುವುದಕ್ಕೂ ಮುಂಚೆ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕು. ಇಂಥ ಕಮೆಂಟ್ಗಳನ್ನು ಮಾಡುವುದರಿಂದ ದೂರ ಇರಿ ಎಂದು ನಾಗಲಕ್ಷ್ಮಿ ಚೌಧರಿ ಎಚ್ಚರಿಕೆ ನೀಡಿದ್ದಾರೆ.