ವಿಜಯಸಾಕ್ಷಿ ಸುದ್ದಿ, ನರೇಗಲ್ : ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಪ.ಪಂ ಮುಖ್ಯಾಧಿಕಾರಿ ನಿಡಶೇಶಿ ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಸ್ವಾತಂತ್ರ್ಯಗೊಂಡು 77 ವರ್ಷಗಳು ಕಳೆದವು. ಈ ಅವಧಿಯಲ್ಲಿ ನಮ್ಮ ದೇಶ ಅಭಿವೃದ್ಧಿಯ ದೃಷ್ಟಿಯಿಂದ ಮುಂಚೂಣಿಯಲ್ಲಿದೆ. ಆದರೆ ಇದು ಜಗತ್ತಿನ ಮೊದಲನೆ ದೇಶವೆಂದು ಹೆಸರಾಗಬೇಕಾದರೆ ನಮ್ಮೆಲ್ಲರ ಕಾಣಿಕೆ ಅವಶ್ಯಕವಾಗಿದೆ. ಇಂದಿನ ದಿನ ನಾವೆಲ್ಲರೂ ದೇಶದ ಅಭಿವೃದ್ಧಿಯಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಳ್ಳುತ್ತೇವೆ ಎಂಬ ಸಂಕಲ್ಪವನ್ನು ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಮಾಜಿ ಅಧ್ಯಕ್ಷರು, ಪ.ಪಂ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೊಲೀಸ್ ಠಾಣೆಯಲ್ಲಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸ್ವಾತಂತ್ರ ದಿನೋತ್ಸವವವನ್ನು ಆಚರಿಸಲಾಯಿತು.
ಪಿಎಸ್‌ಐ ಐಶ್ವರ್ಯ ನಾಗರಾಳ ಧ್ವಜಾರೋಹಣ ನೆರವೇರಿಸಿದರು. ನಮ್ಮ ಹಿರಿಯರು ತಮ್ಮ ಶಿಸ್ತು, ಸಂಯಮದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದರು ಮತ್ತು ಮಡಿದರು. ನಾವು ಶಿಸ್ತು ಮತ್ತು ಸಂಯಮಗಳಿಂದ ನಡೆದಿದ್ದರೆ ಆದರೆ ನಮ್ಮ ಜೀವನದಲ್ಲಿಯೂ ನಾವು ಅಭಿವೃದ್ಧಿಯನ್ನು ಕಾಣಬಹುದು. ನಾಗರಿಕರು ತಮ್ಮ ಉತ್ತಮ ಜೀವನ ನಿರ್ವಹಣೆಗಾಗಿ ಸರಕಾರ ಮಾಡಿರುವ ಕಾನೂನುಗಳ ಪಾಲನೆಯನ್ನು ಮಾಡಬೇಕು. ಇದರಿಂದ ಜೀವನದಲ್ಲಿ ನೆಮ್ಮದಿ ದೊರಕುತ್ತದೆ ಎಂದು ಅವರು ಹೇಳಿದರು. ಠಾಣೆಯ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.