ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸುಣಗಾರ ಓಣಿಯಲ್ಲಿ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ವತಿಯಿಂದ 12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಯುವ ಮುಖಂಡ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, 12ನೇ ಶತಮಾನದ ಶರಣರು ಜಾತಿ ರಹಿತ, ಸಮ ಸಮಾಜ ಕಟ್ಟುವ ಕನಸು ಕಂಡಿದ್ದರು. ಸಮಾಜದಲ್ಲಿರುವ ಮೂಢನಂಬಿಕೆಯನ್ನು ಬೇರು ಸಮೇತ ಕಿತ್ತಹಾಕಲು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ಮಾತನಾಡಿ, ಶರಣರ ಪರಂಪರೆಯಲ್ಲಿ ಮುನ್ನಡೆಯೋಣ. ಪಾಶ್ಚಾತ್ಯ ಸಂಸ್ಕೃತಿಗಳನ್ನು ಬಿಟ್ಟು ಶರಣ ಸಂಸ್ಕೃತಿಗೆ ಅಂಟಿಕೊಳ್ಳಲಿ ಎಂದರು.
ಗದಗ ಜಿಲ್ಲಾ ಕೆಪಿಸಿಸಿ ಮೀನುಗಾರರ ವಿಭಾಗದ ಜಿಲ್ಲಾಧ್ಯಕ್ಷ ಗುರಪ್ಪ ತಿರ್ಲಾಪೂರ ಮಾತನಾಡಿ, ಸಮುದಾಯದ ಜನ ಸಂಘಟನೆ, ಹೋರಾಟ, ಶಿಕ್ಷಣ ಮಾನವೀಯ ಮೌಲ್ಯವನ್ನು ಮಕ್ಕಳಿಗೆ ಕಲಿಸೋಣ. ಅಂದಾಗ ಶರಣರ ಪರಂಪರೆಗೆ ಮೆರುಗು ಬರುತ್ತದೆ ಎಂದರು.
ಸಮಾಜದ ಮಹಿಳಾ ಅಧ್ಯಕ್ಷರಾದ ಸುಜಾತ ಗುಡಿಸಾಗರ ನೇತೃತ್ವದಲ್ಲಿ ಮಹಿಳೆಯರು ಕುಂಭ ಮೆರವಣಿಗೆಗೆ ಶೋಭೆ ತಂದರು. ಈ ಸಂದರ್ಭದಲ್ಲಿ ಅಂಬಿಗರ ಸಮಾಜ ಟ್ರಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ, ಉಪಾಧ್ಯಕ್ಷ ಪ್ರವೀಣ ನೀಲಣ್ಣವರ, ಯುವ ಘಟಕದ ಅಧ್ಯಕ್ಷ ಮಂಜುನಾಥ ಗುಡಿಸಾಗರ, ಖಜಾಂಚಿ ಹನಮಂತ ಅಂಬಿಗೇರ, ರಾಜು ಪೂಜಾರ, ರಮೇಶ ಬೆನಕಲ್ಲ, ಬಸವರಾಜ ಗುಡಿಸಾಗರ, ಮಲ್ಲಿಕಾರ್ಜುನ ಬಾರಕೇರ, ನಾಗರಾಜ ಬಾರಕೇರ, ನಾರಾಯಣ ನರಗುಂದ, ಪ್ರಕಾಶ ಬಿನ್ನಾಳ, ರಾಜು ಗುಡಿಸಾಗರ, ಅಶೋಕ ಜಕನೂರ, ಅಮಿತ ಪೂಜಾರ, ಮಧು ಪೂಜಾರ, ಹರೀಶ ಬಾರಕೇರ, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.



