ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣಗಳು ನಡೆದಿವೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, “ಯಾರ ಅಧಿಕಾರದ ಅವಧಿಯಲ್ಲಿ ಅಧಿಕಾರಿಗಳಿಗೆ ಏನಾಗಿದೆ ಎಂಬುದನ್ನು ದಾಖಲೆಗಳನ್ನು ತೆರೆದು ನೋಡಲಿ. ಸತ್ಯ ಏನೆಂಬುದು ಆಗ ಸ್ಪಷ್ಟವಾಗುತ್ತದೆ. ಯಾರೇ ಆಗಿರಲಿ, ಅಧಿಕಾರಿಗಳಿಗೆ ಧಮ್ಕಿ ಹಾಕಿದರೆ ಅಥವಾ ಅನ್ಯಾಯ ಮಾಡಿದರೆ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ” ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ಅವರನ್ನು ಲೀಸ್ ಬೇಸ್ಡ್ ಸಿಎಂ ಎಂದು ಕುಮಾರಸ್ವಾಮಿ ಟೀಕಿಸಿರುವ ವಿಚಾರಕ್ಕೆ ತಿರುಗೇಟು ನೀಡಿದ ಮಹದೇವಪ್ಪ, “ಸಿದ್ದರಾಮಯ್ಯ ಅವರು ಒಟ್ಟು 7.6 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಅಂಥವರು ಯಾವ ರೀತಿ ಲೀಸ್ ಬೇಸ್ಡ್ ಸಿಎಂ ಆಗುತ್ತಾರೆ?” ಎಂದು ಪ್ರಶ್ನಿಸಿದರು.
“ಲೀಸ್ ಎಂದರೆ ಮೂರು-ನಾಲ್ಕು ತಿಂಗಳು ಮಾತ್ರ. ಆದರೆ ಸಿದ್ದರಾಮಯ್ಯ ಅವರು ದೀರ್ಘಕಾಲ ಸಿಎಂ ಆಗಿ ಆಡಳಿತ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಸ್ವತಃ ಎಷ್ಟು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಎಂಬುದನ್ನೂ ಜನ ಗಮನಿಸಬೇಕು. ಇವೆಲ್ಲವೂ ಹಾಸ್ಯಾಸ್ಪದ ಮಾತುಗಳು ಅಷ್ಟೇ” ಎಂದು ಮಹದೇವಪ್ಪ ಹೇಳಿದರು.



