ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಲೋಟಸ್ ಇನ್ ಹೋಟೆಲ್‌ನಲ್ಲಿ 2024-2026ನೇ ಸಾಲಿನ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (NIMA)ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸೌಖ್ಯದಾ ಆಸ್ಪತ್ರೆಯ ಸಹಯೋಗದೊಂದಿಗೆ ಸಿಎಂಇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಉಪಾಧ್ಯಕ್ಷ, ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಜಯಕುಮಾರ ಬ್ಯಾಳಿ ಮಾತನಾಡಿ, NIMA ಸಂಘಟನೆಯು 1948ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಂದ ಉದ್ಘಾಟಿಸಲ್ಪಟ್ಟ ರಾಷ್ಟ್ರಮಟ್ಟದ ನೋಂದಾಯಿತ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿದೆ. ಮುಂದಿನ ಎರಡು ವರ್ಷಗಳವರೆಗೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆ ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಜಯಪಾಲ ಸಿಂಗ್ ಸಮೊರೆಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಆಯುಷ್ ಇಲಾಖೆ ಹಾಗೂ NIMA ಜಂಟಿ ಸಹಯೋಗದೊಂದಿಗೆ ಆಯುಷ್ ಚಿಕಿತ್ಸಾ ಪದ್ಧತಿಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯ ಪ್ರವೃತ್ತರಾಗೋಣ ಎಂದರು.
ಸಿಎಂಇ ಕಾರ್ಯಕ್ರಮದ ಅಂಗವಾಗಿ ಸೌಖ್ಯದಾ ಆಸ್ಪತ್ರೆಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಚಿಕ್ಕ ಮಕ್ಕಳ ತಜ್ಞರಾದ ಡಾ. ಶಿವನಗೌಡ ಜೋಳದರಾಶಿ, ನವಜಾತ ಶಿಶುಗಳ ಆರೈಕೆ ಹಾಗೂ ಡಾ. ಪ್ರವೀಣ ಡಂಬಳ ಮೂತ್ರ ರೋಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಆರ್. ಹಿರೇಮಠ ನೂತನ ಅಧ್ಯಕ್ಷರಾದ ಡಾ. ಜಯಕುಮಾರ್ ಬ್ಯಾಳಿ, ಕಾರ್ಯದರ್ಶಿಗಳಾದ ಡಾ. ಬಸವರಾಜ ಚನ್ನಪ್ಪಗೌಡ್ರ, ಖಜಾಂಚಿಗಳಾದ ಡಾ. ಗಿರೀಶ ಬಡಿಗೇರ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ನಿಸ್ವಾರ್ಥ ಸೇವೆಯೊಂದಿಗೆ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕೆಂದು ತಿಳಿಸಿದರು.
ಡಾ. ರಾಜೇಶ್ವರಿ ಹಿರೇಮಠ ಹಾಗೂ ಡಾ. ಉಮಾ ಗಾಣಿಗೇರ ಧನ್ವಂತರಿ ಪ್ರಾರ್ಥನೆ ಹಾಡಿದರು. ರೋಣದ ರಾಜೀವ್ ಗಾಂಧಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಐ.ಬಿ. ಕೊಟ್ಟೂರ್‌ಶೆಟ್ಟಿ ಸ್ವಾಗತಿಸಿದರು. ಡಾ. ಗಿರೀಶ ಬಡಿಗೇರವರು NIMA ಇತಿಹಾಸವನ್ನು ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನೂತನ ಕಾರ್ಯದರ್ಶಿಗಳಾದ ಡಾ. ಬಸವರಾಜ ಚನ್ನಪ್ಪಗೌಡ್ರ ವಂದಿಸಿದರು.
ಮುಖ್ಯ ಅತಿಥಿಗಳಾದ ಡಾ. ಜಿ.ಬಿ. ಪಾಟೀಲ ಮಾತನಾಡಿ, ಸಂಘಟನೆಯು ಇಂದಿನ ದಿನಮಾನಗಳಲ್ಲಿ ಅತ್ಯಂತ ಅವಶ್ಯಕವಾಗಿದ್ದು, ರಾಜ್ಯ ಮಟ್ಟದಲ್ಲಿಯೇ ಅತ್ಯುತ್ತಮ ಸಂಘಟನೆಯಾಗಿ ಹೊರಹೊಮ್ಮಬೇಕೆಂದು ತಿಳಿಸಿದರು. ಇನ್ನೋರ್ವ ಅತಿಥಿ ಡಾ. ಯು.ವಿ. ಪುರದ ಮಾತನಾಡಿ, ಈ ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಎಲ್ಲ ಸದಸ್ಯರು ಕುಟುಂಬ ಸಮೇತ ಭಾಗವಹಿಸಿ ಭಾವನಾತ್ಮಕ ಸಂಬಂಧವನ್ನು ಬೆಸೆಯಬೇಕೆಂದು ತಿಳಿಸಿದರು.