ಭವ್ಯ ಭಾರತ ಕಟ್ಟುವ ಸಂಕಲ್ಪ ಮಾಡೋಣ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಭಾರತದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹನೀಯರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದು ಉಪತಹಸೀಲ್ದಾರ ಎಸ್.ಎಸ್. ಬಿಚಾಲಿ ಹೇಳಿದರು.

Advertisement

ಡಂಬಳ ಗ್ರಾಮದ 7, 8ನೇ ತರಗತಿ ಉರ್ದು ಶಾಲೆ ಮತ್ತು 1ರಿಂದ 6ರವರೆಗಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಅವರು ಮಾತನಾಡಿ, ಜಾತಿ, ಧರ್ಮ, ಭೇದ-ಭಾವ ಹೊಂದದೆ ಎಲ್ಲರೂ ಸಮಾನರಾಗಿ ಶಾಂತಿಯಿಂದ ಬಾಳೋಣ. ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾದ ಈ ದಿನದಂದು ಸಮ ಸಮಾಜ ಕಟ್ಟಲು ಸಂಕಲ್ಪ ಮಾಡೋಣ ಎಂದರು.

ಅಂಜುಮನ್ ಅಧ್ಯಕ್ಷ ಬಸೀರಹಮ್ಮದ ತಾಂಬೋಟಿ, ಬುಡ್ನೆಸಾಬ ಅತ್ತಾರ, ಹುಸೇನಸಾಬ ಹೊಸಬಾವಿ ಮಾತನಾಡಿ, ಮಹಾನ್ ಸ್ವಾತಂತ್ರ‍್ಯ ಸೇನಾನಿಗಳಾದ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್ ಮುಂತಾದವರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಡಾ.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ನಾವು ಗೌರವದಿಂದ ನೆನೆಸಿಕೊಳ್ಳಬೇಕು. ಅವರ ತ್ಯಾಗದಿಂದಲೇ ಇಂದು ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ.

ಸ್ವಾತಂತ್ರ‍್ಯ ದಿನವು ಕೇವಲ ಆಚರಣೆಯ ದಿನವಲ್ಲ. ಅದು ನಮ್ಮ ದೇಶದ ಕಡೆಗಿನ ಜವಾಬ್ದಾರಿಗಳನ್ನು ನೆನಪಿಸುವ ದಿನವೂ ಹೌದು. ನಮ್ಮ ಕರ್ತವ್ಯ ದೇಶದ ಏಕತೆ, ಪ್ರಗತಿ ಮತ್ತು ಶಾಂತಿಗಾಗಿ ಶ್ರಮಿಸುವುದು. ನಾವೆಲ್ಲರೂ ದೇಶಭಕ್ತಿಯಿಂದ ಭಾರತವನ್ನು ಮತ್ತಷ್ಟು ಶಕ್ತಿಶಾಲಿಯಾಗಿ ನಿರ್ಮಿಸಬೇಕಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ವಿವಿಧ ದೇಶಪ್ರೇಮ ಮೂಡಿಸುವ ದೇಶ ಭಕ್ತಿಗೀತೆಗಳಿಗೆ ನೃತ್ಯ ಮಾಡಿದರು. ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಎಮ್.ಎಮ್. ವಿಭೂತಿ, ಗ್ರಾಮ ಆಡಳಿತಾಧಿಕಾರಿಗಳು, ಗ್ರಾ.ಪಂ ಸದಸ್ಯ ಪೀರಖಾನ ಹೊಸಪೇಟಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಎಮ್.ಜೆ. ಕಾಸ್ತಾರ, ಖಾಜಾಹುಸೇನ ಹೊಸಪೇಟಿ, ಮೈನುದ್ದಿನ ಆಲೂರ, ಖಾದರಸಾಬ ಬಾಗಲಿ, ಮರ್ದಾನಸಾಬ ಹೊಂಬಳ, ಬುಡ್ನೆಸಾಬ ಮೂಲಿಮನಿ, ಶಿಕ್ಷಕರಾದ ಡಿ.ಕೆ. ಹೊಳೆಮ್ಮನವರ, ಹಸೀನಾ, ಸುಸನ್ನಾ ಕನವಳ್ಳಿ, ನೂಸರಹತ್ತ ಸೇಕ, ಹಸೀನಾ ಹೊಸಪೇಟಿ, ತಸಲೀಮ್ ಪಟವಾರಿ ಸೇರಿದಂತೆ ಶಾಲಾ ಸಿಬ್ಬಂದಿಗಳು, ಯುವಕರು ವಿದ್ಯಾರ್ಥಿಗಳು ಇದ್ದರು.

ಸಕಲ ಜಾತಿ, ಧರ್ಮ, ಭಾಷೆ, ಪ್ರದೇಶಗಳ ಜನರೆಲ್ಲ ಒಗ್ಗಟ್ಟಾಗಿ ಬೃಹತ್ ಪ್ರಜಾಪ್ರಭುತ್ವದ ಯಶಸ್ಸಿಗಾಗಿ ನಾವೆಲ್ಲರೂ ಸಾಮರಸ್ಯದಿಂದ ಬಾಳುತ್ತಿದ್ದೇವೆ. ಬಹುಜನರ ಒಳಿತಿಗಾಗಿ, ಬಹುಜನರ ಕಲ್ಯಾಣಕ್ಕಾಗಿ ಎಂಬ ಮಂತ್ರವನ್ನು ಸಾರುತ್ತಾ ಭವ್ಯ ಭಾರತ ಕಟ್ಟುವ ಸಂಕಲ್ಪ ಮಾಡೋಣ ಎಂದು ಉಪತಹಸೀಲ್ದಾರ ಎಸ್.ಎಸ್. ಬಿಚಾಲಿ ಕರೆ ನೀಡಿದರು.


Spread the love

LEAVE A REPLY

Please enter your comment!
Please enter your name here