ಕನ್ನಡದ ಅಂತಃಸತ್ವವನ್ನು ಹೆಚ್ಚಿಸುವ ಸಂಕಲ್ಪ ಮಾಡೋಣ: ರಾಜು ರಜಪೂತ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ದಿನವೂ ಮೊಬೈಲ್, ಕಂಪ್ಯೂಟರ್, ಪ್ರಾಯೋಗಿಕ ತರಗತಿ, ಕ್ಲಾಸ್‌ರೂಂನಲ್ಲಿ ಇಂಗ್ಲೀಷ್ ಭಾಷೆಯೊಂದಿಗೆ ಸಂವಹನ-ಶಿಕ್ಷಣ ಹೊಂದುವ ಇಂಜಿನಿಯರಿAಗ್ ವಿದ್ಯಾರ್ಥಿಗಳು ಶುಕ್ರವಾರ ಬಿಳಿ ಶರ್ಟ್, ಧೋತಿ, ಜುಬ್ಬಾ-ಪೈಜಾಮ್ ಮತ್ತು ಕೊರಳಲ್ಲಿ ಹಳದಿ-ಕೆಂಪಿನ ಕನ್ನಡದ ಶಾಲು, ಇನ್ನು ವಿದ್ಯಾರ್ಥಿನಿಯರು ಗ್ರಾಮೀಣ ಶೈಲಿಯ ಇಳಕಲ್, ಶಿಗ್ಲಿ ಸೀರೆ ಕುಪ್ಪಸ ತೊಟ್ಟು ಕನ್ನಡದ ಜಾನಪದ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮದಿಂದ ಕನ್ನಡದ ಹಬ್ಬ ಆಚರಿಸಿದರು.

Advertisement

ಈ ಸಂಭ್ರಮ ಕಂಡುಬಂದಿದ್ದು, ಲಕ್ಮೇಶ್ವರದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ. ಕರ್ನಾಟಕ ರಾಜ್ಯೋತ್ಸವ ಹಾಗೂ ಅಗಡಿ ಕನ್ನಡ ಸಂಘದ 10ರ ಸಂಭ್ರಮದ ಅಂಗವಾಗಿ ಪಿಯುಸಿ ಮತ್ತು ಇಂಜಿನಿಯರಿಂಗ್ ಕಾಲೇಜಿನ ಎಲ್ಲ ವಿಭಾಗದ ವತಿಯಿಂದ ಕೈಗೊಂಡ ಅಗಡಿ ಕನ್ನಡ ಹಬ್ಬ ವಿದ್ಯಾರ್ಥಿಗಳಲ್ಲಿ ಸಂಭ್ರಮವನ್ನು ಮೂಡಿಸಿತು. ಕಾಲೇಜಿನೆಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಿ ಕನ್ನಡ ಕಂಪು ಮೇಳೈಸಿತ್ತು. ಕನ್ನಡ ಹಬ್ಬದ ನಿಮಿತ್ತ ಒಂದು ವಾರ ಮೊದಲೇ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಂದ ಕನ್ನಡ ಕುರಿತ ಪ್ರಬಂಧ, ಚರ್ಚಾಸ್ಫರ್ಧೆ, ನೃತ್ಯ, ಹಾಡು, ಸಂಗೀತ, ಚಿತ್ರಕಲಾ ಸ್ಫರ್ಧೆ ಏರ್ಪಡಿಸಲಾಗಿತ್ತು. ಶುಕ್ರವಾರ ನಡೆದ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಸಾಪ ಶಿಗ್ಲಿ ಹೋಬಳಿ ಘಟಕದ ಅಧ್ಯಕ್ಷ ರಾಜು ರಜಪೂತ ಕನ್ನಡ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ  2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡನಾಡು ಕಲೆ, ಭಾಷೆ, ಸಂಸ್ಕೃತಿಗೆ ತನ್ನದೇ ಅದ ಕೊಡುಗೆ ನೀಡಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ನೀಡಿದ ಭಾಷೆ ನಮ್ಮದು. ಇಂದಿನ ಮಾಹಿತಿ-ತಂತ್ರಜ್ಞಾನ ಯುಗದಲ್ಲಿ ಇಂಗ್ಲೀಷ್ ಸೇರಿ ಇತರೇ ಭಾಷೆಗಳ ಜ್ಞಾನ ಅಗತ್ಯ. ಆದರೆ ಕನ್ನಡ ತಾಯಿಯ ಮಕ್ಕಳಾದ ನಾವೆಲ್ಲ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗೋಣ ಮತ್ತು ಕನ್ನಡದ ಅಂತಃಸತ್ವವನ್ನು ಹೆಚ್ಚಿಸುವ ಸಂಕಲ್ಪ ಮಾಡೋಣ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ವಹಿಸಿದ್ದರು. ಅಗಡಿ ಸನ್‌ರೈಸ್ ಆಸ್ಪತ್ರೆಯ ಡಾ. ರಾಜಶೇಖರ ಮೂಲಿಮನಿ, ಡಾ. ಎನ್.ಹಯವದನ, ಡಾ. ಆರ್.ಎಂ. ಪಾಟೀಲ, ಡಾ. ಸುಭಾಷ್ ಮೇಟಿ, ಪ್ರೊ. ವಿಕ್ರಮ ಶಿರೋಳ, ಡಾ. ಗಿರೀಶ ಯತ್ತಿನಹಳಿ, ಕನ್ನಡ ಹಬ್ಬದ ಸಂಯೋಜಕ ಪ್ರೊ. ಸೋಮಶೇಖರ ಕೆರಿಮನಿ ಸೇರಿ ಕಾಲೇಜಿನ ಪ್ರಾಧ್ಯಾಪಕ ವೃಂದ, ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು. ಪ್ರೊ. ಪ್ರತಿಮಾ ಮಹಾಪುರುಷ ಸ್ವಾಗತಿಸಿದರು, ಮೇಘಾ ಪಾಶೆಟ್ಟಿ, ತಸ್ಲೀಮಾ ಕಾರಡಗಿ, ಪ್ರೊ. ರಾಜೇಶ್ವರಿ ಗಾಮನಗಟ್ಟಿ, ಪ್ರೊ. ಷಣ್ಮುಖ ಜಿ, ಪ್ರೊ. ರಾಜೇಂದ್ರ ಶೆಟ್ಟರ್ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here