ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ. 18 ವರ್ಷ ಸಮೀಪಿಸಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಹಕ್ಕು ಮತ್ತು ಕರ್ತವ್ಯ ನಿಭಾಯಿಸುವ ಮೂಲಕ ವಿಶ್ವಮಾನ್ಯ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು ಎಂದು ದಿವ್ಯಾಣಿ ನ್ಯಾಯಾಧೀಶರಾದ ಸತೀಶ ಎಂ ಹೇಳಿದರು.
ಅವರು ಶನಿವಾರ ತಾಲೂಕಾಡಳಿತ, ತಾ.ಪಂ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
1950, ಜ.25ರಂದು ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ನೆನಪಿಗಾಗಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಮತದಾನ ಎನ್ನುವ ಮಹತ್ವದ ಹಕ್ಕನ್ನು ಕಳೆದುಕೊಳ್ಳದೇ 18 ವರ್ಷ ಸಮೀಪಿಸಿದ ಪ್ರತಿಯೊಬ್ಬರೂ ಮತದಾನದ ಹಕ್ಕು ಪಡೆದು ಯಾವುದೇ ಜಾತಿ, ಧರ್ಮ, ಪಕ್ಷ ಬೇಧವೆಣಿಸದೆ ನಾಡು-ದೇಶದ ಅಭಿವೃದ್ಧಿಗಾಗಿ ಶ್ರಮಿಸುವ ಸೂಕ್ತ, ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಮತದಾನ ಮಾಡುವದು ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ ವಾಸುದೇವ ಎಂ ಸ್ವಾಮಿ, ಮತದಾನ ಎನ್ನುವದು ಶ್ರೇಷ್ಠ ಕಾರ್ಯ. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಯುವ ಮತದಾರರನ್ನು ಉತ್ತೇಜಿಸುವುದು, ಮತದಾರರ ನೋಂದಣಿ ಹೆಚ್ಚಿಸುವುದು, ಮತದಾನದ ಬಗ್ಗೆ ಅರಿವು, ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮತದಾರರ ದಿನಾಚರಣೆಯ ಉದ್ದೇಶವಾಗಿದೆ. ಈ ವರ್ಷದ ಥೀಮ್ `ಮತದಾನ ಮಾಡುವುದಕ್ಕಿಂತ ದೊಡ್ಡದೇನೂ ಇಲ್ಲ-ನಾನು ಖಂಡಿತವಾಗಿ ಮತದಾನ ಮಾಡುತ್ತೇನೆ’ ಎಲ್ಲರೂ ಇದನ್ನು ಪಾಲಿಸುವ ಸಂಕಲ್ಪ ಮಾಡೋಣ ಎಂದರು.
ತಾ.ಪಂ ಇಓ ಕೃಷ್ಣ ಧರ್ಮರ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ ಮಾತನಾಡಿದರು. ಸಿಪಿಐ ನಾಗರಾಜ ಮಾಡಳ್ಳಿ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ತಾಲೂಕಾ ಮಟ್ಟದ ಉತ್ತಮ ಬಿಎಲ್‌ಓ ಪರಶುರಾಮ ಮೇಲ್ಮುರಿ ಅವರನ್ನು ಸನ್ಮಾನಿಸಲಾಯಿತು. ಹೊಸ ಮತದಾರರಿಗೆ ಎಪಿಕ್ ಕಾರ್ಡ್ ನೀಡಲಾಯಿತು. ಪ್ರಾಚಾರ್ಯ ಎಂ.ಎಸ್. ಕೊಕ್ಕರಗುಂದಿ ನಿರ್ವಹಿಸಿದರು. ಕಂದಾಯ, ಪುರಸಭೆ ಸಿಬ್ಬಂದಿಗಳು, ಕಾಲೇಜಿನ ಉಪನ್ಯಾಸಕ ವರ್ಗದವರು ಇದ್ದರು.