ವಿಜಯಸಾಕ್ಷಿ ಸುದ್ದಿ, ಧಾರವಾಡ: ಪ್ರಗತಿ ಮತ್ತು ನಾವೀನ್ಯತೆಗೆ ಬದ್ಧತೆಯನ್ನು ತೋರಿಸುವ ಸಂಕಲ್ಪವನ್ನು ಮಾಡುತ್ತಾ, ನಮ್ಮ ನಾಡು-ನುಡಿಯ ಪ್ರೀತಿಯನ್ನು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿಸದೆ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರವನ್ನು ಕನ್ನಡದಲ್ಲೇ ಮಾಡುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ ಎಂದು ನಾವೆಲ್ಲರೂ ಪಣತೊಡೋಣ ಎಂದು ಕಾರ್ಮಿಕ ಇಲಾಖೆ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಹೇಳಿದರು.
ಧಾರವಾಡ ಜಿಲ್ಲಾಡಳಿತವು ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಷ್ಟ್ರಧ್ವಜಾರೋಹಣ ನೇರವೇರಿಸಿ, ಜಿಲ್ಲೆಯ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಬಾವುಟದಲ್ಲಿನ ಕೆಂಪು ಮತ್ತು ಹಳದಿ ಬಣ್ಣವು ನಮ್ಮ ರಾಜ್ಯದ ಶಕ್ತಿ, ಶೌರ್ಯ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ತಿಳಿಸುತ್ತದೆ. ನಾಡಿನ ಭಾಷೆಯಾದ ಕನ್ನಡವು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುತ್ತದೆ. ಕರ್ನಾಟಕ ಏಕೀಕರಣ ಚಳವಳಿಯು ದೇಶದ ಸ್ವಾತಂತ್ರ್ಯ ಹೋರಾಟದಷ್ಟೇ ಪ್ರಮುಖ ಸ್ಥಾನವನ್ನು ಪಡೆದಿದೆ. 1956ರಲ್ಲಿ ಕನ್ನಡ ಮಾತನಾಡುವ ವಿವಿಧ ಭಾಗಗಳು ಸೇರಿ ಮೈಸೂರು ರಾಜ್ಯವು ಉದಯವಾಯಿತು. ಕರ್ನಾಟಕ ಏಕೀಕರಣ ಚಳವಳಿಯನ್ನು ಹುಟ್ಟುಹಾಕಿದ್ದು ಧಾರವಾಡ ಜಿಲ್ಲೆ ಆಗಿದೆ. ಆಲೂರ ವೆಂಕಟರಾವರು ಇದರ ಮೂಲ ಪುರುಷರು. ಏಕೀಕರಣ ಚಳವಳಿಯ ಪ್ರಮುಖರಾದ ರಾ. ಹ. ದೇಶಪಾಂಡೆರವರು, ಡೆಪ್ಯುಟಿ ಚನ್ನಬಸಪ್ಪರವರು, ಅದರಗುಂಚಿ ಶಂಕರಗೌಡ ಪಾಟೀಲರು ಮತ್ತಿತರರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಚಿವರು ತಿಳಿಸಿದರು.
ಕನ್ನಡಿಗರ ಶಾಂತಿಪ್ರಿಯತೆ, ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ಕನ್ನಡದ ಸಾಹಿತ್ಯದ ಮೂಲ ಪುರುಷರೇ ಕಾರಣ ಹಾಗೂ ಅವರ ಕೃತಿಗಳು ಸಾರ್ವಕಾಲಿಕ. ಸದಾ ಕಾಲಕ್ಕೂ ಮಾನವ ಪೀಳಿಗೆಗೆ ದಾರಿದೀಪವಾಗಿದೆ. ಈ ದಿನ ಕನ್ನಡಾಂಬೆಗೆ ನುಡಿನಮನ ಅರ್ಪಿಸಲಾಗುತ್ತಿದೆ ಎಂದು ಸಚಿವ ಸಂತೋಷ ಲಾಡ್ ಅವರು ನುಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಫ್. ಎಚ್. ಜಕ್ಕಪ್ಪನವರ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಐಎಎಸ್ ಪ್ರೊಬೆಷನರಿ ಅಧಿಕಾರಿ ರೀತಿಕಾ ವರ್ಮಾ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ ಡಾ. ಡಿ. ಎಚ್. ಹೂಗಾರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಕರ್ನಾಟಕ ರಾಜ್ಯೋತ್ಸವವು ನಮ್ಮ ಬೇರುಗಳನ್ನು ನೆನಪಿಸಿಕೊಳ್ಳುವ ಮತ್ತು ನಮ್ಮ ರಾಜ್ಯದ ಸಾಧನೆಗಳನ್ನು ಗೌರವಿಸುವ ಸಂದರ್ಭವಾಗಿದೆ. ಭಾಷೆ, ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿ, ಸಮೃದ್ಧಿಯಲ್ಲಿ ಮುಂದುವರಿಯುತ್ತಿರುವ ನವ ಕರ್ನಾಟಕವನ್ನು ನಿರ್ಮಿಸಲು ನಾವೆಲ್ಲರೂ ಪಣತೊಡೋಣ. ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ನಮ್ಮ ಜಿಲ್ಲೆಯವರಾದ ಶಿಕ್ಷಣ ತಜ್ಞ ಹಾಗೂ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಪ್ರೊ. ರವೀಂದ್ರ ಕೋರಿಶೆಟ್ಟರ, ಚಿತ್ರಕಲಾವಿದ ಬಿ. ಮಾರುತಿ ಅವರಿಗೆ ಸಚಿವರು ಅಭಿನಂದನೆಗಳನ್ನು ತಿಳಿಸಿದರು.


