ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ಒದಗಿಸುವ ಉದ್ದೇಶದಿಂದ ‘ದುಡಿಯೋಣ ಬಾ’ ಅಭಿಯಾನವನ್ನು ಆದ್ಯತೆ ಮೇರೆಗೆ ಹಮ್ಮಿಕೊಳ್ಳಲಾಗಿದೆ.
ಮೇ 01, 20255ರಿಂದ ಆರಂಭವಾಗುವ ‘ದುಡಿಯೋಣ ಬಾ’ ಅಭಿಯಾನ ಜೂನ್ ಅಂತ್ಯದವರೆಗೆ ನಡೆಯಲಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಣ್ಣ ದೊಡ್ಡಮನಿ ತಿಳಿಸಿದ್ದಾರೆ.
ಇದುವರೆಗೆ ನರೇಗಾ ಯೋಜನೆಯಡಿ ಒಳಗೊಳ್ಳದೆ ಇರುವ ಕುಟುಂಬಗಳನ್ನು ಸಮೀಕ್ಷೆ ಮಾಡಿ ಅರ್ಹರಿಗೆ ಉದ್ಯೋಗ ಚೀಟಿ ವಿತರಿಸಲು ಆದ್ಯತೆ ನೀಡಲಾಗುವುದು. ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಯೋಜನೆಯ ಕುರಿತು ಅರಿವು ಮೂಡಿಸಿ, ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಗುರುತಿಸಿ, ಯೋಜನೆಯ ಸೌಲಭ್ಯಗಳನ್ನು ದೊರಕಿಸಿ ಕೊಡಲು ಒತ್ತು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಯೋಜನೆಯಡಿ ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು ಮತ್ತು ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದು ಅಭಿಯಾನದ ಉದ್ದೇಶವಾಗಿದೆ ಎನ್ನುತ್ತಾರೆ ಇಒ ರಾಮಣ್ಣ ದೊಡ್ಡಮನಿ. ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಆಸ್ತಿಗಳನ್ನು ಸೃಜನೆ ಮಾಡುವ ಮೂಲಕ ಪರ್ಯಾಯ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು, ಅಂಗವಿಕಲರು, ಮಹಿಳೆಯರು, ಹಿರಿಯ ನಾಗರಿಕರು, ಮಂಗಳ ಮುಖಿಯರು ಸೇರಿದಂತೆ ದುರ್ಬಲ ವರ್ಗಗಳಿಗೆ ಆದ್ಯತೆಯ ಮೇರೆಗೆ ಜಾಬ್ ಕಾರ್ಡ್ ಮತ್ತು ಕೆಲಸ ಒದಗಿಸುವುದು ಸಹ ಅಭಿಯಾನದ ಭಾಗವಾಗಿದೆ ಎಂದು ತಿಳಿಸಿದ್ದರೆ.
ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಪುರುಷ ಮತ್ತು ಮಹಿಳೆಯರಿಗೆ ಕೂಲಿ ದರದಲ್ಲಿ ವ್ಯತ್ಯಾಸ ಇರುವುದನ್ನು ಕಾಣಬಹುದು ಮತ್ತು ಕೆಲಸದ ಸಮಯ ಕೂಡ ಅಧಿಕವಾಗಿರುತ್ತದೆ. ನರೇಗಾ ಯೋಜನೆಯಡಿ ಪುರುಷ ಮತ್ತು ಮಹಿಳೆಯವರಿಗೆ ಸಮಾನ ಕೂಲಿ ಹಾಗೂ ನಿಗದಿತ ಕೆಲಸದ ಪ್ರಮಾಣ ಇರುತ್ತದೆ. ಈ ಅಂಶಗಳನ್ನು ಗ್ರಾಮೀಣ ಜನರಿಗೆ ಮುಖ್ಯವಾಗಿ ಮಹಿಳೆಯರಿಗೆ ಮನವರಿಕೆ ಮಾಡುವ ಮೂಲಕ ನರೇಗಾ ಯೋಜನೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸಲಾಗುವುದು. ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರನ್ನು ಒಳಗೊಂಡು ಕಾಯಕ ಸಂಘಗಳನ್ನು ರಚನೆ ಮಾಡುವುದು ಮತ್ತು ಮಹಿಳಾ ಕಾಯಕ ಬಂಧುಗಳನ್ನು ನೇಮಿಸಿಕೊಂಡು 2025-26ನೇ ಸಾಲಿನಲ್ಲಿ ತಾಲೂಕಿನಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣದಲ್ಲಿ ಶೇ 60ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಉದ್ಯೋಗ ಚೀಟಿ ಪಡೆಯುವ ವಿಧಾನ
ಉದ್ಯೋಗ ಚೀಟಿಗಾಗಿ 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಗ್ರಾಮ ಪಂಚಾಯಿತಿಗೆ ನಮೂನೆ-1ರಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜೊತೆಗೆ ಪಾಸ್ ಪೋರ್ಟ್ ಅಳತೆಯ ಫೋಟೊ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಬೇಕು ಎಂದು ರಾಮಣ್ಣ ದೊಡ್ಡಮನಿ ತಿಳಿಸಿದ್ದಾರೆ.