ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಕಾಂಗ್ರೆಸ್ ಪಕ್ಷವು ಆಂತರಿಕ ಬಿಕ್ಕಟ್ಟಿನಿಂದ ತಾಲೂಕಿನಲ್ಲಿ ಅಂತ್ಯಕ್ಕೆ ಮುನ್ನುಡಿಯಾಗಿದೆ ಎನ್ನುವವರಿಗೆ ಪಕ್ಷದ ಎಲ್ಲಾ ಮುಖಂಡರು ಒಂದೆಡೆ ಸೇರುವ ಮೂಲಕ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗೆ ಅತಿ ಹೆಚ್ಚು ಮತಗಳ ಮುನ್ನಡೆ ನೀಡಿ ಪಕ್ಷ ಬಲವರ್ಧನೆಗೆ ಬೆಂಬಲಿಸೋಣ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನೂತವಾಗಿ ಆಯ್ಕೆಗೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷದಲ್ಲಿ ಏನೇ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಸರಿಪಡಿಸಿಕೊಂಡು ನಾವೆಲ್ಲರೂ ಮುಂಬರುವ ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳ ಗೆಲುವಿಗೆ ಶ್ರಮಿಸಬೇಕು. ಚುನಾವಣಾ ಪೂರ್ವದಲ್ಲಿ ನೀಡಿದ್ದ ೫ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಒದಗಿಸಿದ್ದೇವೆ. ಎಲ್ಲಾ ಯೋಜನೆಗಳಿಂದ ದೀನದಲಿತರಿಗೆ, ಮಧ್ಯಮ ವರ್ಗದ ಜನತೆಗೆ, ಬಡ ನಿರುದ್ಯೋಗಿ ಯುವಕರಿಗೆ ಅನುಕೂಲವಾಗಿದೆ ಎಂದರು.
ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್ ಮಾತನಾಡಿ, 5 ಗ್ಯಾರಂಟಿ ಯೋಜನೆಗಳ ಪ್ರಯೋಜನಗಳ ಬಗ್ಗೆ ಪ್ರತಿ ಮನೆಗೆ ತೆರಳಿ ತಿಳಿಸವ ಮೂಲಕ ಮುಂಬರುವ ಚುನಾವಣೆಯಲ್ಲಿ ಗೆಲುವಿಗಾಗಿ ಒಗ್ಗಾಟ್ಟಾಗಿ ಶ್ರಮಿಸೋಣ ಎಂದರು.
ನೂತನವಗಿ ಆಯ್ಕೆಯಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಪಕ್ಷ ನೀಡಿರುವ ಜವಾಬ್ದಾರಿಗೆ ಸಮರ್ಪಕ ನ್ಯಾಯ ಒದಗಿಸತ್ತೇನೆ. ತಾಲೂಕಿನ ಇನ್ನೂ ಕೆಲವು ಮುಖಂಡರಲ್ಲಿ ಅಸಮಾಧಾನಗಳಿದ್ದು, ಎಲ್ಲರನ್ನೂ ಒಗ್ಗೂಡಿಸಿ ಪಕ್ಷ ಬಲವರ್ಧನೆಗೆ ಕಂಕಣ ಬದ್ದವಾಗಿ ನಿಲ್ಲೋಣ ಎಂದರು.
ಪಕ್ಷದ ಹಿರಿಯ ಮುಖಂಡರಾದ ಮಹಾಬಲೇಶ್ವರ ಗೌಡ ಮಾತನಾಡಿದರು. ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜುನಾಥ, ಚಂದ್ರಶೇಖರ್ ಭಟ್, ವೆಂಕಟೇಶ್ ವಕೀಲರು, ಎಂ.ರಾಜಶೇಖರ, ಬಿ.ಕೆ.ಪ್ರಕಾಶ್, ಗೊಂಗಡಿ ನಾಗರಾಜ್, ಜಯಲಕ್ಷ್ಮಿ, ವಗ್ಗಾಲಿ ನಜೀರ್, ಉದಯಶಂಕರ್, ಅಗ್ರಹಾರ ಎಂ.ರವಿ, ಬಿ.ಬಿ. ಹೊಸೂರಪ್ಪ ಬಾಗಳಿ ಮುಂತಾದವರಿದ್ದರು.