ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಭಾರತೀಯ ಜೀವ ವಿಮಾ ನಿಗಮದ 1ನೇ ಶಾಖೆಯಲ್ಲಿ 46ನೇ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ವಿಭಾಗದ ಸೀನಿಯರ್ ಡಿವಿಷನಲ್ ಮ್ಯಾನೇಜರ್ ಎಸ್‌ಡಿಎಂಬಿ ಎಸ್ ಚಕ್ರವರ್ತಿ, ಮಾರ್ಕೆಟಿಂಗ್ ಮ್ಯಾನೇಜರ್ ಎಂಎಂ ರತ್ನಪ್ರಭಾ ಶಂಕರ ಮತ್ತು ಸೇಲ್ಸ್ ಮ್ಯಾನೇಜರ್ ಎಂ.ಎಸ್. ಪ್ರಶಾಂತ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂ ಚಕ್ರವರ್ತಿ ಮಾತನಾಡಿ, ಎಲ್‌ಐಸಿ ದೇಶದಲ್ಲೇ ಅತಿ ದೊಡ್ಡ ವಿಮಾ ಸಂಸ್ಥೆಯಾಗಿದ್ದು, ಈ ವಿಮಾ ಸಂಸ್ಥೆ ತನ್ನ ಗ್ರಾಹಕರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು, ಇದೀಗ ತನ್ನ ಎಲ್ಲಾ ಪಾಲಿಸಿಗಳನ್ನು ಹೊಸದಾಗಿ ನವೀಕರಿಸಿದೆ. ಗ್ರಾಹಕರು ಹೆಚ್ಚು ಹೆಚ್ಚು ಪಾಲಿಸಿಗಳನ್ನು ತೆಗೆದುಕೊಂಡು ತಮ್ಮ ಜೀವನವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಬೇಕು ಎಂದು ಹೇಳಿದರು.
ರತ್ನಪ್ರಭಾ ಅವರು ಮಾತನಾಡಿ, ಗದಗ 1ನೇ ಶಾಖೆ ಧಾರವಾಡ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯಲು ವಿಮಾ ಪ್ರತಿನಿಧಿಗಳು ಶ್ರಮ ವಹಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಶಾಖಾಧಿಕಾರಿ ಎಚ್.ಎಂ. ಭಜಂತ್ರಿ ವಹಿಸಿದ್ದರು. ಉಪಶಾಖಾಧಿಕಾರಿ ವಿಕ್ರಮ್ ಶೀಲವಂತ ಹಾಗೂ ಜಿ.ಎಸ್. ತಳವಾರ ನಿರೂಪಿಸಿದರು.



