ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಅತಿವೃಷ್ಟಿಯಿಂದ ರಸ್ತೆ, ಮನೆ, ವ್ಯಾಪಾರ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಜನತೆ ಚಿಂತೆಯಲ್ಲಿದ್ದು, ಜಿಲ್ಲಾ ಆಡಳಿತಕ್ಕೆ ತುರ್ತು ಸವಾಲು ಎದುರಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಸಾಮಾನ್ಯ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಕೆಸರುಮಯವಾಗಿದ್ದು, ವಾಹನ ಸಂಚಾರಕ್ಕೆ ದೊಡ್ಡ ಸವಾಲು ಎದುರಾಗಿದೆ. ಅನೇಕ ಪ್ರದೇಶಗಳಲ್ಲಿ ಚರಂಡಿ ನೀರು ತುಂಬಿ ಮನೆಗಳೊಳಗೆ ನುಗ್ಗಿದೆ. ಹಳೆ ಮನೆಗಳ ಮೇಲ್ಛಾವಣಿ ಹಾಗೂ ಮಣ್ಣಿನ ಗೋಡೆಗಳು ಕುಸಿದು ಬೀಳಲು ಆರಂಭಿಸಿವೆ.
ಗ್ರಾಮೀಣ ಭಾಗದಲ್ಲಿ ಹೊಲಗಳು ಜಲಾವೃತಗೊಂಡಿದ್ದು, ಕೃಷಿಕರು ಬೆಳೆ ಹಾನಿಯ ಆತಂಕದಲ್ಲಿ ತತ್ತರಿಸುತ್ತಿದ್ದಾರೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ವಾಹನಗಳು ಮಧ್ಯದಲ್ಲೇ ನಿಂತು ಸವಾರರು ಪರದಾಡುವ ಪ್ರಸಂಗ ಹಲವಡೆ ನಿರ್ಮಾಣವಾಗಿದೆ.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಪ್ರಮುಖ ರಸ್ತೆಗಳು ನೀರಿನಲ್ಲಿ ಮುಳುಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಸ್ಸು, ಆಟೋ, ಬೈಕ್, ಕಾರು ಎಲ್ಲವೂ ಜಲಾವೃತ ರಸ್ತೆಗಳ ಮಧ್ಯೆ ನಿಲ್ಲುವಂತಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು, ಕಚೇರಿ ಕಾರ್ಮಿಕರ ತನಕ ಎಲ್ಲರೂ ಮಳೆ ಕಾಟದಿಂದ ನರಳುತ್ತಿದ್ದಾರೆ.
ಕಡಿಮೆ ಎತ್ತರದ ಪ್ರದೇಶಗಳಲ್ಲಿ ಮನೆಗಳಿಗೆ ಮಳೆನೀರು ನುಗ್ಗಿದ್ದು, ಜನರು ಮನೆ ಬಿಟ್ಟು ಹೊರಗಡೆ ಆಶ್ರಯ ಪಡೆಯುವ ಪರಿಸ್ಥಿತಿ ಎದುರಾಗಿದೆ. ಅನೇಕರು ತಮ್ಮ ಮನೆಯ ನಿತ್ಯಬಳಕೆಯ ಸಾಮಗ್ರಿಗಳನ್ನು ಕಳೆದುಕೊಂಡಿದ್ದು, ಮನೆಯ ಒಳಾಂಗಣದಲ್ಲೇ ದೋಣಿ ಹಾಯುವಂತಾಗಿದೆ.
ಗ್ರಾಮೀಣ ಭಾಗಗಳಲ್ಲಿ ಹೊಲಗಳು ಜಲಾವೃತಗೊಂಡಿದ್ದು, ಬೆಳೆ ಹಾನಿ ಭಾರೀ ಪ್ರಮಾಣದಲ್ಲಿ ಸಂಭವಿಸಿದೆ. ಬಿತ್ತನೆ ಮಾಡಿದ್ದ ಹೆಸರು, ಈರುಳ್ಳಿ, ಮೆಕ್ಕೆಜೋಳ ಮುಂತಾದ ಬೆಳೆಗಳು ನೀರಿನಲ್ಲಿ ಮುಳುಗಿದ್ದು, ರೈತರ ಆತಂಕ ಹೆಚ್ಚಿಸಿದೆ. ಮಳೆ ನೀರಿನಲ್ಲಿ ಕೊಳೆಗೇರಿದ ಕಸ ಹಾಗೂ ಚರಂಡಿ ಮಿಶ್ರಣದಿಂದ ಡೆಂಗ್ಯೂ, ಮಲೇರಿಯಾ, ಚರ್ಮರೋಗ ಹರಡುವ ಭೀತಿ ವ್ಯಕ್ತವಾಗಿದೆ. ಆರೋಗ್ಯ ಇಲಾಖೆ ತುರ್ತು ಕ್ರಮಗಳನ್ನು ಕೈಗೊಂಡಿದ್ದು, ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಮಳೆ ಬಂದ ತಕ್ಷಣವೇ ರಸ್ತೆಗಳು ಜಲಾವೃತವಾಗುವುದು, ಗುಂಡಿಗಳಾಗುವುದು ಅಚ್ಚರಿಯ ಸಂಗತಿಯಲ್ಲ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಗಳಿಗೆ ಮಳೆಯ ಮೊದಲ ಹನಿ ಬಿದ್ದರೆ ಸಾಕು, ಡಾಂಬರು ಬಿರುಕು ಬಿಟ್ಟುಹೋಗುತ್ತಿದೆ. ಇದು ಗುತ್ತಿಗೆದಾರರ ನಿರ್ಲಕ್ಷ್ಯವೋ ಅಥವಾ ಗುಣಮಟ್ಟ ಪರಿಶೀಲನೆ ನಡೆಸದ ಅಧಿಕಾರಿಗಳ ನಿರ್ಲಕ್ಷ್ಯವೋ ಎಂಬ ಪ್ರಶ್ನೆಗಳು ಉದ್ಭವಿಸಿವೆ.



