ವಿಜಯಸಾಕ್ಷಿ ಸುದ್ದಿ, ಗದಗ: ವೈಶಿಷ್ಟ್ಯಪೂರ್ಣ, ವಿನೂತನ ಆಲೋಚನೆಗಳಿಂದ ತುಂಬಿದ ಮಹಾಯೋಗಿ ವೇಮನರು ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಯೋಗಿ ವೇಮನರ ಪದ್ಯಗಳಲ್ಲಿ ಆರ್ದಶ ಸಮಾಜ ನಿರ್ಮಾಣದ ಪರಿಕಲ್ಪನೆ ಇದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2729ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಡೆದುದೆಲ್ಲವನ್ನು ನೇರವಾಗಿ ಪದ್ಯಗಳ ಮೂಲಕ ಹೇಳುವ ಸ್ವಭಾವ ಯೋಗಿ ವೇಮನರದ್ದು. ಪ್ರತಿದಿನ ಮಾನವ ತಪ್ಪಿ ನಡೆದಾಗ ತಿದ್ದಿಕೊಂಡು ಮುಂದೆ ಸಾಗಬೇಕು. ಯೋಗಿ ವೇಮನ ಮೊದಲಿನಿಂದಲೂ ಸತ್ಯಪ್ರಿಯ. ಜಗದಲ್ಲಿ ಎಲ್ಲರೂ ಸಮಾನರು. ಮೇಲಿಲ್ಲ-ಕೀಳಿಲ್ಲ ಎಂಬುದನ್ನು ಹೇಳುತ್ತಾ ಎಲ್ಲಾ ಜಾತಿಗಳು ಹಿರಿತನವನ್ನು ಪೊಳ್ಳು ಎಂದು ಸಾರಿದ. ಜಾತಿ ವ್ಯವಸ್ಥೆಯನ್ನು ಖಂಡಿಸಿದ. ಸಮಾನತೆಯಿಂದ, ಸಾಮರಸ್ಯದಿಂದ ಬದುಕಿದಾಗ ಮಾತ್ರ ಮನುಷ್ಯನ ಬಾಳು ಬೆಳಕಾಗುತ್ತದೆ ಎಂದು ಶ್ರೀಗಳು ನುಡಿದರು.
ಬಸವರಾಜ ಹೊರಟ್ಟಿಯವರು ಈಗಾಗಲೇ ಅವ್ವ ಸೇವಾ ಟ್ರಸ್ಟಿನ ವತಿಯಿಂದ 1 ಲಕ್ಷ 10 ಸಾವಿರ ರೂಪಾಯಿ ದತ್ತಿನಿಧಿ ಇಟ್ಟಿದ್ದರು. ಹೆಚ್ಚುವರಿಯಾಗಿ 3 ಲಕ್ಷ ರೂಪಾಯಿಗಳನ್ನು ದತ್ತಿನಿಧಿಯಾಗಿ ನೀಡಿದ್ದಾರೆ. ಈ ದತ್ತಿನಿಧಿಯಿಂದ ಪ್ರಸ್ತುತ ಸಮಾಜಕ್ಕೆ ಅವ್ವನ ಪಾತ್ರ ಮತ್ತು ಮಹತ್ವ ಅರಿಯಲು ಸಾಕಷ್ಟು ಪ್ರೇರಕ ಶಕ್ತಿಯಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ಇನ್ನೂ 59 ದಿನ ಮಾತ್ರ ಉಳಿದಿದೆ. ಮಕ್ಕಳು ಚೆನ್ನಾಗಿ ಏಕಾಗ್ರತೆಯಿಂದ ಓದಬೇಕು, ಭಯಪಡಬಾರದು. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಗಳಿಸಬೇಕೆಂದು ಶ್ರೀಗಳು ಶುಭಹಾರೈಸಿದರು.
ಅವ್ವ ಸೇವಾ ಟ್ರಸ್ಟಿನ ಗದಗ ಸಂಚಾಲಕರಾದ ಡಾ. ಬಸವರಾಜ ಧಾರವಾಡ ಅವರು ಎಸ್.ಎಸ್.ಎಲ್.ಸಿ. ಸಂವಾದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಕಳೆದ 14 ವರ್ಷಗಳಿಂದ ಸಭಾಪತಿ ಬಸವರಾಜ ಹೊರಟ್ಟಿಯವರ ನೇತೃತ್ವದ ಅವ್ವ ಸೇವಾ ಟ್ರಸ್ಟ್ ಅಸಹಾಯಕರಿಗೆ, ಪ್ರತಿಭಾವಂತರಿಗೆ ಆಸರೆಯಾಗಿ ಧನಸಹಾಯ ಮಾಡುತ್ತಾ ‘ಅವ್ವನ ಪ್ರೀತಿ’ಯನ್ನು ಉಣಿಸುತ್ತಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ವೇಮನರ ಪದ್ಯಗಳು ಸಮಾಜದಲ್ಲಿನ ಮೌಢ್ಯ, ಅಂಧಶ್ರದ್ಧೆ, ಮೇಲು-ಕೀಳು ಎಂಬ ಭಾವವನ್ನು ತೊಡೆದು ಹಾಕುವಲ್ಲಿ ದಾರಿದೀಪವಾಗಿವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡವಿನಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ, ಶಂಕರ ಹಡಗಲಿ ಸ.ನಿ. ಅಕ್ಷರ ದಾಸೋಹ ಗದಗ ಹಾಗೂ ಶಿಕ್ಷಣ ಸಂಯೋಜಕ ಮುರುಳಿ ಸೊಲ್ಲಾಪುರ ಉಪಸ್ಥಿತರಿದ್ದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಸಂಗೀತ ಸೇವೆ ನೀಡಿದರು. ಧರ್ಮಗ್ರಂಥ ಪಠಣ ತೆಹರಿನ್ ಖವಾಸ, ವಚನ ಚಿಂತನವನ್ನು ಕೀರ್ತಿರಾಜ್ ಹೂಗಾರ ನೆರವೇರಿಸಿದರು. ದಾಸೋಹ ಸೇವೆಯನ್ನು ಚಂದ್ರಶೇಖರ ಶರಣಪ್ಪ ಅಂಗಡಿ ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.
ಸಹ ಚೇರಮನ್ ಶಿವಾನಂದ ಹೊಂಬಳ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸೆಲ್ವಾಸಿ, ಗಂಗಾಧರ, ಕೆ.ವಿ. ಕೊರಡ್ಡಿ, ಸಿ.ಎಸ್. ಮಾನ್ವಿ, ಉಮೇಶ್ ನಿಪ್ಪಾಣಿಕರ್, ಎಂ.ಐ. ಶಿವನಗೌಡ್ರ, ಸತೀಶ ಹೊಂಬಾಳೆ ಹಾಜರಿದ್ದರು. ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಮಕ್ಕಳ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಹಲವಾರು ಪ್ರಶ್ನೆಗಳಿಗೆ ಪರಿಹಾರ ಸೂಚಿಸಿದರು.