ವಿಜಯಸಾಕ್ಷಿ ಸುದ್ದಿ, ಹೊನ್ನಾಳಿ: ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಚಿನ್ನವಿಲ್ಲದೇ ಬದುಕಬಹುದು. ಆದರೆ ಮಣ್ಣು ಇಲ್ಲದೇ ಬದುಕಲು ಸಾಧ್ಯವಾಗದು. ಸಂಪತ್ತು ಇಲ್ಲದಿದ್ದರೂ ಬದುಕಬಹುದು. ಸದ್ಗುಣ-ಸಚ್ಚಾರಿತ್ರ್ಯ ಇಲ್ಲದಿದ್ದರೆ ಬದುಕಿಗೆ ಬೆಲೆಯಿಲ್ಲ. ಸದ್ಗುಣಗಳಿಂದ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಮಾರಿಕೊಪ್ಪ ರಸ್ತೆಯಲ್ಲಿರುವ ಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ಶಿಲಾಮಂದಿರ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ-ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ವ್ಯರ್ಥ. ಮನುಷ್ಯನಿಗೆ ಸಂಪತ್ತು, ಅದರಿಂದ ಅವನ ಇಷ್ಟಾರ್ಥಗಳನ್ನು ಅಷ್ಟೇ ಬಯಸುತ್ತಾನೆ. ಆದರೆ ಮೊದಲಿರುವ ಧರ್ಮ ಕೊನೆಗೆ ಇರುವ ಮೋಕ್ಷದ ಬಗ್ಗೆ ಚಿಂತನೆಯನ್ನೇ ಮಾಡುವುದಿಲ್ಲ. ಸುಖ, ಶಾಂತಿಯ ಬದುಕಿಗೆ ಧರ್ಮವೇ ಮೂಲ ಎಂಬುದನ್ನು ಮರೆಯಬಾರದು. ಜ್ಯೋತಿ ಉರಿದು ಬೆಳಕು ಕೊಡುವಂತೆ ಆಚಾರ್ಯರು, ಸಂತ ಶ್ರೇಷ್ಠರು ನಂದಾ ದೀಪದಂತಿದ್ದು ಬೆಳಕು ತೋರುತ್ತಾರೆ. ಸತ್ಕಾರ್ಯಗಳಿಂದ ಮನುಷ್ಯನ ಅಂತರಂಗ ಪರಿಶುದ್ಧವಾಗುತ್ತದೆ. ಸತ್ಯ ಶುದ್ಧ ಕಾಯಕದಿಂದ ಬದುಕು ಸುಂದರ ಸುಭದ್ರಗೊಳ್ಳುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ.
ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆಗಾಗಿ ವೀರಭದ್ರಸ್ವಾಮಿ ಅವತರಿಸಿ ಬಂದಿದ್ದಾನೆ. ಪರಶಿವನ ಜಟಾ ಮುಕುಟದಿಂದ ಅವತರಿಸಿದ ಶ್ರೀ ವೀರಭದ್ರೇಶ್ವರ ಶಿವ ಶಕ್ತಿಯ ಮಹತ್ವವನ್ನು ಎತ್ತಿ ಹಿಡಿದ ಮಹಾದೈವ. ವೀರಶೈವರಷ್ಟೇ ಅಲ್ಲ, ಬೇರೆ ಬೇರೆ ಧರ್ಮದವರು ಸಹ ಶ್ರೀ ವೀರಭದ್ರಸ್ವಾಮಿಯನ್ನು ಆರಾಧಿಸುತ್ತಾರೆ. ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರಸ್ವಾಮಿ ಎಲ್ಲೆಡೆಯಲ್ಲಿ ನೆಲೆಗೊಂಡು ಭಕ್ತ ಸಂಕುಲವನ್ನು ಕಾಪಾಡುತ್ತಿದ್ದಾನೆ. ಹೊನ್ನಾಳಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನವನ್ನು ಶಿಲಾಮಯದಿಂದ ನಿರ್ಮಿಸಿ ಇಂದು ಲೋಕಾರ್ಪಣೆ ಮಾಡುತ್ತಿರುವುದು ತಮಗೆ ಅತ್ಯಂತ ಸಂತೋಷವನ್ನು ತಂದಿದೆ ಎಂದರು.
ಶಾಸಕ ಡಿ.ಜಿ. ಶಾಂತನಗೌಡರು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಬೆನಕಯ್ಯ ಶಾಸ್ತ್ರಿಗಳು ಹೊನ್ನಾಳಿ, ನಿಜಗುಣ ಶಿವಯೋಗಿ ಶಾಸ್ತ್ರಿಗಳು ಮತ್ತು ಪ್ರಕಾಶಯ್ಯ ಶಾಸ್ತ್ರಿಗಳು ಶ್ರೀ ವೀರಭದ್ರೇಶ್ವರ ಸ್ವಾಮಿಯ ಪ್ರತಿಷ್ಠಾಪನೆಯ ಎಲ್ಲಾ ವೈದಿಕ ಕಾರ್ಯಗಳನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.
ಹೂವಿನಹಡಗಲಿ ಪ್ರಕಾಶ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟಣಶೆಟ್ಟಿ ಪರಮೇಶ ಸ್ವಾಗತಿಸಿದರು. ಹೆಚ್.ಆರ್. ಗಂಗಾಧರ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳನ್ನು ಸಾರೋಟದೊಂದಿಗೆ ಮೆರವಣಿಗೆ ಮಾಡಿ ಬರಮಾಡಿಕೊಂಡರು.
ನೇತೃತ್ವ ವಹಿಸಿದ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಭಾವನೆ ಒಳ್ಳೆಯದಿದ್ದರೆ ಭಾಗ್ಯ ಬೆನ್ನತ್ತಿ ಬರುತ್ತದೆ. ನಮ್ಮ ಜೀವನ ದೋಣಿಗೆ ನಾವೇ ನಾಯಕರು. ಸಜ್ಜನ ಸತ್ಪುರುಷರ ಸಂಗಮದಿAದ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳುವುದು. ಶ್ರೀ ವೀರಭದ್ರನ ಶಕ್ತಿ ಅದ್ಭುತವಾದುದು. ದುಷ್ಟರನ್ನು ಸಂಹರಿಸಿ ಸಜ್ಜನರಿಗೆ ಒಳಿತು ಮಾಡಿದ ವೀರಭದ್ರ ನಮ್ಮೆಲ್ಲರ ಆರಾಧ್ಯ ದೈವವಾಗಿದ್ದಾನೆ ಎಂದರು.



