ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಪ್ರಾಣಿ-ಪಕ್ಷಿ ಜೀವ ಸಂಕುಲದಿಂದ ಮಾನವ ಕಲಿಯಬೇಕಾದ್ದು ಬಹಳಷ್ಟಿದೆ. ಪಕ್ಷಿಗಳಿಗೆ ಅರಳಿ ಮರವೇ ಪ್ರಪಂಚವಾಗಿದೆ. ಅದರಂತೆ ಮಾನವನಿಗೆ ಭೂಮಂಡಲವು ಅರಳಿ ಮರವಿದ್ದಂತೆ ಎಂದು ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮಿಗಳು ತಿಳಿಸಿದರು.
ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಹಾಲವರ್ತಿ ಮಠದಲ್ಲಿ ಸೋಮವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ನಡೆದ `ಹಾಲರ್ತಿ ಅಂಗಳದಲ್ಲಿ ತಿಂಗಳ ಅರಿವಿನ ಬೆಳಕು’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಆಸೆ, ಕಾಮ, ಕ್ರೋಧಗಳಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಶರಣರು ನೀಡಿ ಹೋಗಿರುವ ವಚನಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ದೇಹದಲ್ಲಿನ ಪ್ರತಿ ಕಣಕಣದಲ್ಲಿಯೂ ದೇವರಿದ್ದಾನೆ, ಮಾತುಗಳು ಮತ್ತೊಬ್ಬರಿಗೆ ಮಧುರ ಹಾಗೂ ತೃಪ್ತಿದಾಯಕವಾಗಿರಬೇಕು. ಸಮುದ್ರ ನೀರು ಉಪಯೋಗಕ್ಕೆ ಬರುವುದಿಲ್ಲ. ಆದರೆ ಕಿರಿದಾದ ಬಾವಿಯ ನೀರು ಕುಡಿಯಲು ಯೋಗ್ಯವಾಗಿರುತ್ತದೆ. ಆದ್ದರಿಂದ ಯಾವುದೇ ಮನುಷ್ಯನ ಮುಖಚರ್ಯೆ ನೋಡಿ ಅಳೆಯುವ ಮುನ್ನ ಅವನ ಅಂತರಾಳವನ್ನು ಅರಿಯಬೇಕು ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಹಾಗೂ ಸಂಶೋಧಕ ಬಿ.ಸಿ. ಮಹಾಬಲೇಶ್ ಉಪನ್ಯಾಸ ನೀಡಿ, ವಚನ ಸಾಹಿತ್ಯವು ಸಮುದ್ರವಿದ್ದಂತೆ. ಅದರ ಆಳಕ್ಕೆ ಇಳಿದಾಗ ಮಾತ್ರ ಅದರ ರುಚಿ ಫಲಿಸುತ್ತದೆ. ವಚನಗಳು ವಿಶಿಷ್ಟ ಸ್ಥಾನಮಾನ ಹೊಂದಿವೆ. ಪಂಚಾಕ್ಷರಿ ಮಂತ್ರ ಪಠಿಸಿದರೆ ಆತ್ಮ ಶುದ್ಧಿಯಾಗುತ್ತದೆ ಎಂದರು.
ನಾಟಕ ರಚನಕಾರ ಎಚ್.ಎನ್. ಕೊಟ್ರಪ್ಪ, ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿದರು. ಎಚ್.ಎಸ್. ವಿಠೋಭ ಶಿಕ್ಷಕರು, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಬಿ.ಜಿ. ಜಯಶ್ರೀ, ಕೆ.ಎಂ. ಗುರುಸಿದ್ದಯ್ಯ, ಸಾಹಿತಿ ಬಣಕಾರ್ ರಾಜಶೇಖರ್ ಬಾಗಳಿ, ನಿವೃತ್ತ ಮುಖ್ಯ ಶಿಕ್ಷಕ ಬಾಗಳಿ ವಿ.ಬಿ. ಮಲ್ಲೇಶ್, ಬಣಕಾರ್ ಮಂಜಣ್ಣ, ಶ್ವೇತಾ, ಡಾ. ಎ.ಕೆ. ಸಂತೋಷ್, ಎಸ್. ವೀರಣ್ಣ, ಎಸ್.ಬಿ. ಪಾಟೀಲ್, ಪಿ. ಜಗದೀಶ್, ಚನ್ನಬಸವನಗೌಡ, ಚನ್ನಪ್ಪ, ಜಿ. ಬಸವರಾಜ್, ಎ.ಕೆ. ಸಾವಿತ್ರಮ್ಮ, ನೇತ್ರಮ್ಮ, ಅನುಪಮಾ ಗುರುಸಿದ್ದಯ್ಯ, ಸಿ.ಎಂ. ಲತಾ ಮುಂತಾದವರಿದ್ದರು.