ವಿಜಯಸಾಕ್ಷಿ ಸುದ್ದಿ, ಗದಗ: ಶರಣರ ಜೀವನವು ಒಂದು ದಿವ್ಯ ಸಂದೇಶ ಸಾರುವ ಜ್ಞಾನ ದೀವಿಗೆಯಾಗಿದೆ. ಅದನ್ನು ಸದಾಕಾಲ ಬೆಳಗಿಸಿ ನಮ್ಮ ಜೀವನದ ಕತ್ತಲೆಯನ್ನು ಹೊಡೆದೋಡಿಸಿ, ಶರಣರ ತತ್ವ ಮತ್ತು ಚಿಂತನೆಗಳ ಪ್ರಕಾರ ಜೀವನ ನಡೆಸುವುದರೊಂದಿಗೆ ಸಮಾಜಕ್ಕೆ ಮಾದರಿ ಪ್ರಜೆಗಳಾಗಬೇಕೆಂದು ಶರಣರು ದಿವ್ಯ ಜ್ಞಾನದ ನುಡಿಯನ್ನು ದಯಪಾಲಿಸಿದ್ದಾರೆ. ಅವರ ನುಡಿಯಂತೆ, ಅವರ ತತ್ವದಂತೆ ನಾವು ಜೀವನ ನಡೆಸಿದರೆ ಸುಖಿಗಳಾಗಿರಬಹುದು ಎಂದು ಎಂ.ಕೆ. ಲಮಾಣಿ ಹೇಳಿದರು.
ಶಿರಹಟ್ಟಿ ನಗರದ ಸಿಸಿಎನ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಶಿರಹಟ್ಟಿ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಬಸವರಾಜ್ ಗಿರಿತಮ್ಮಣ್ಣನವರ್ ಮಾತನಾಡಿ, ಬಸವಾದಿ ಶರಣರ ಸಂದೇಶವು ಪ್ರತಿಯೊಬ್ಬ ಸಮಾಜದ ಜೀವಿಗಳಿಗೆ ದಿವ್ಯ ಅಮೃತ ಔಷಧಿಗಳಾಗಿವೆ. 12ನೇ ಶತಮಾನದ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು ಜೀವನವನ್ನು ಪಾವನ ಮಾಡಿಕೊಳ್ಳುವ ಒಂದು ಸುವರ್ಣ ಅವಕಾಶ ನಮಗೆ ನೀಡಿದ್ದಾರೆ. ಮಾನವನು ತನ್ನ ಸ್ವಾರ್ಥವನ್ನು ಬಿಟ್ಟು ಪರೋಪಕಾರ ಜೀವಿಯಾಗಿ ಬದುಕಲು ಸಾಕಷ್ಟು ಅವಕಾಶಗಳಿದ್ದರೂ ತನ್ನ ಸ್ವಾರ್ಥಕ್ಕೆ ಸಮಾಜವನ್ನು, ಪರಿಸರವನ್ನು ಹಾಳು ಮಾಡುವುದರೊಂದಿಗೆ ತನ್ನ ಜೀವನವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾನೆ. ಶರಣರು ಹೇಳಿದ ಸಂದೇಶ ಪಾಲಿಸಿದರೆ ನಮ್ಮೆಲ್ಲರ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಗಣ್ಯ ವ್ಯಾಪಾರಸ್ಥರು, ಶಿಕ್ಷಣ ಪ್ರೇಮಿಗಳಾದ ಚಂದ್ರಣ್ಣ ನೂರಶೆಟ್ಟರ ಮಾತನಾಡಿ, ವಿದ್ಯಾರ್ಥಿಗಳ ಜೀವನ ಅಮೂಲ್ಯ ರತ್ನವಿದ್ದಂತೆ. ಈ ಸಮಯದಲ್ಲಿ ಸರಿಯಾಗಿ ಅಭ್ಯಾಸ, ಅಧ್ಯಯನ ಮಾಡುವುದರ ಮೂಲಕ ಸಮಾಜದಲ್ಲಿ ಗೌರವ ಪಡೆಯುವುದಕ್ಕೆ ಶರಣರ ಸಂದೇಶ ಸಹಾಯಕಾರಿಯಾಗಿದೆ ಎಂದು ಹೇಳಿದರು.
ದತ್ತಿ ದಾನಿಗಳಾದ ಎಚ್.ಎಂ. ದೇವಗಿರಿ ಮಾತನಾಡಿ, ನಮಗೆ ಲಭ್ಯವಾದ ಸಂಪತ್ತನ್ನು ಒಳ್ಳೆಯ ಕೆಲಸಕ್ಕೆ, ಉತ್ತಮ ಸಮಾಜ ನಿರ್ಮಾಣಕ್ಕೆ ವಿನಿಯೋಗಿಸಿದಾಗ ಶರಣರ ತತ್ವಕ್ಕೆ ನಡೆದುಕೊಂಡಂತೆ ಆಗುತ್ತದೆ ಎಂದು ನಮ್ಮ ತಂದೆಯವರ ಹೆಸರಿನಲ್ಲಿ ದತ್ತಿ ನೀಡಿ ಅವರ ಹೆಸರನ್ನು ಅಜರಾಮರವಾಗಿ ಶರಣರ ವಿಚಾರದಲ್ಲಿ ಉಳಿಯುವಂತೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಪೊಲೀಸ್‌ಪಾಟೀಲ್ ಸ್ವಾಗತಿಸಿದರು. ಚಂಪಾ ಗುರುಮಾತೆಯರು ಕಾರ್ಯಕ್ರಮ ನಿರೂಪಿಸಿದರು. ಚೇಪಾಟಿ ಗುರುಗಳು ವಂದಿಸಿದರು. ರಾಮಣ್ಣ ಕಂಬಳಿ, ವಿ.ಸಿ. ಪೊಲೀಸ್‌ಪಾಟೀಲ್, ನಂದಕ್ಕ ಕಪ್ಪತನವರ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಅತಿಥಿಗಳಾಗಿ ಭಾಗವಹಿಸಿದ ಗದಗ ಜಿಲ್ಲಾ ಶ.ಸಾ.ಪ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಬಸವಣ್ಣವರ ಒಂದೇ ಒಂದು ವಚನವನ್ನು ನಾವು ಪಠಣ ಮಾಡಿಕೊಂಡರೆ ಈ ಜೀವನವೇ ಸಾರ್ಥಕ ಜೀವನವಾಗುತ್ತದೆ. ವಿದ್ಯಾರ್ಥಿಗಳಾದವರು ಎಲ್ಲಾ ಶರಣರ ಅಮೃತವಚನಗಳನ್ನು ಅಭ್ಯಾಸ ಮಾಡುವುದರೊಂದಿಗೆ ಅದರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


