ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಅಜ್ಞಾನದ ಅಂಧಕಾರ ತೊಲಗಿಸಿ ಸುಜ್ಞಾನದ ಬೆಳಕು ಮೂಡಿಸುವ ಗುರುವಿನ ಸ್ಮರಣೆಯಿಂದ ಜೀವನ ಪಾವನ, ಸಾರ್ಥಕತೆ ಹೊಂದುತ್ತದೆಂದು ಮೈಸೂರ/ಬನ್ನಿಕೊಪ್ಪದ ಜಪದ ಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ಹೇಳಿದರು.
ಅವರು ಗುರುವಾರ ಪಟ್ಟಣದ ಕರೇವಾಡಿಮಠದ ಲಿಂ.ಶ್ರೀ ಶಂಕರ ಶಿವಾಚಾರ್ಯರ 77ನೇ ಪುಣ್ಯಾರಾಧನೆ ಸ್ಮರಣೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಠ ಮಾನ್ಯಗಳು ನಾಡಿನ ಭಕ್ತ ಕುಲಕೋಟಿಯ ಶ್ರೇಯಸ್ಸಿಗಾಗಿ ಮತ್ತು ತ್ರಿವಿಧ ದಾಸೋಹಕ್ಕಾಗಿ ಅವಿರತ ಸೇವೆ ಮಾಡಿವೆ. ಬಾಲ್ಯದಿಂದಲೇ ಗುರುವಿನ ಕರುಣೆ, ಸಂಸ್ಕಾರ, ಸನ್ಮಾರ್ಗ ಅವಶ್ಯವಾಗಿದ್ದು, ಸುಂದರ ಬದುಕಿಗೆ ಬೆಳಕಾದ ಗುರುವಿನ ಸ್ಮರಣೆ ಮರೆಯಬಾರದು ಎಂದರು.
ಪುಣ್ಯ ಸ್ಮರಣೋತ್ಸವದ ನಿಮಿತ್ತ ಮಠದಲ್ಲಿ ಬೆಳಿಗ್ಗೆಯೇ ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಮತ್ತು ಕರೇವಾಡಿಮಠದ ಶ್ರೀ ಮಳೇ ಮಲ್ಲಿಕಾರ್ಜುನ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ರುದ್ರ ಬಳಗದವರಿಂದ ರುದ್ರಪಠಣ ಮತ್ತು ಮುತ್ತೈದರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಸಂಜೆ ಹಾಸ್ಯ ಸಾಹಿತಿ ಪಿ. ಜಗನ್ನಾಥ ಅವರ ಹಾಸ್ಯ ಹಾಗೂ ಶ್ರೀ ಶಾರದಾ ಸ್ವರಾಂಜಲಿ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಹಳ್ಳದಕೇರಿ ಓಣಿಯ ಶಕ್ತಿ ಮತ್ತು ಮಾರುತಿ ಭಜನಾ ಸಂಘದವರಿಂದ ಭಜನಾ ಸೇವೆ ನೆರವೇರಿತು.
ಸಂಗಯ್ಯ ಸಾಲಾವಳಿಮಠ, ಚನ್ನಪ್ಪ ಕರೆಯತ್ತಿನ, ಚಂದ್ರಪ್ಪ ಅಮರಶೆಟ್ಟಿ, ಶಿವನಗೌಡ್ರ ಅಡರಕಟ್ಟಿ, ಮಂಜು ಕೋಟಗಿ, ಯಲ್ಲಪ್ಪ ಮುಳುಗುಂದ, ರಮೇಶ ಕಮಡೊಳ್ಳಿ, ದ್ಯಾಮಣ್ಣ ಕಮತದ, ಸೋಮಣ್ಣ ಕರೆಯತ್ತಿನ, ಶಿವಲಿಂಗಪ್ಪ ನಾವ್ಹಿ, ಮಲ್ಲೇಶಪ್ಪ ಕಮಡೊಳ್ಳಿ, ಕೊಟ್ರೇಶ್ ಬಳ್ಳಾರಿ, ವೀರಭದ್ರಯ್ಯ ಹಿರೇಮಠ, ಆನಂದಸ್ವಾಮಿ, ಶಿವರಾಜ ಕರೇವಾಡಿಮಠ ಇದ್ದರು.