ಕಷ್ಟಗಳಿಲ್ಲದೆ ಜೀವನ ಮೌಲ್ಯ ತಿಳಿಯದು: ರಂಭಾಪುರಿ ಶ್ರೀಗಳು

0
Spread the love

ವಿಜಯಸಾಕ್ಷಿ ಸುದ್ದಿ, ಬ್ಯಾಡಗಿ: ಕಷ್ಟಗಳು ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ನಷ್ಟ ಯಾರನ್ನು ನಂಬಬೇಕೆಂಬುದನ್ನು ಕಲಿಸುತ್ತದೆ. ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಏನೆಂದು ತಿಳಿಯದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಬುಧವಾರ ನಗರದ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದ ಗೋಪುರ ಕಳಸಾರೋಹಣ ಹಾಗೂ ೬ನೇ ವರ್ಷದ ಕಾರ್ತೀಕ ದೀಪೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ನಂಬಿಕೆ, ಸ್ನೇಹ, ವಾತ್ಸಲ್ಯ, ವಿಶ್ವಾಸ ಇವು ಮಾನವ ಜೀವನದ ಅತಿ ದೊಡ್ಡ ಆಸ್ತಿ. ಇವುಗಳನ್ನು ಯಾವಾಗಲೂ ಕಳೆದುಕೊಳ್ಳಬಾರದು. ಯಾವಾಗ ಏನಾಗುವುದೋ ಯಾರಿಗೂ ಗೊತ್ತಿಲ್ಲ. ಏನನ್ನೂ ನಾವು ತೆಗೆದುಕೊಂಡು ಹೋಗುವುದಿಲ್ಲ. ಬದುಕಿರುವಷ್ಟು ದಿನ ಒಳ್ಳೆಯವರ ಸ್ನೇಹ ಸಂಬAಧವನ್ನು ಉಳಿಸಿಕೊಳ್ಳಬೇಕು. ಗಳಿಸಿದ ಸಂಪತ್ತು, ಪಡೆದ ಅಧಿಕಾರ, ಏರಿದ ಅಂತಸ್ತು, ಸಂತಸ ಸಂಭ್ರಮ ಎಲ್ಲವೂ ಸ್ಥಿರವಲ್ಲ. ಮಾಡಿದ ಸತ್ಕಾರ್ಯ ಗಳಿಸಿಕೊಂಡ ಅನುಭವ ಶಾಶ್ವತ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯನ್ನಿಟ್ಟು ಬಾಳಬೇಕು. ಶನಿ ದೇವರಿಗೆ ಹೆದರದೇ ಇರುವವರು ಯಾರೂ ಇಲ್ಲ. ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡುವುದಿಲ್ಲ ಎಂಬ ನಾಣ್ಣುಡಿಯಿದೆ. ಶನಿ ಪೂಜೆ ಆರಾಧನೆಯಿಂದ ಆತನ ಕೃಪೆಗೆ ಪಾತ್ರರಾಗಬೇಕಾಗುತ್ತದೆ. ಶ್ರೀ ಶನೇಶ್ವರಸ್ವಾಮಿ ಟ್ರಸ್ಟ್ ಪ್ರತಿ ವರುಷ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.

ಮಡ್ಲೂರು ಮುರುಘಾಮಠದ ಮುರುಘರಾಜೇಂದ್ರ ಸ್ವಾಮಿಗಳು ಉಪಸ್ಥಿತರಿದ್ದರು. ಶ್ರೀ ಶನೇಶ್ವರಸ್ವಾಮಿ ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ ಕಾರಗಿ ಅಧ್ಯಕ್ಷತೆ ವಹಿಸಿದ್ದರು. ಡಾ.ಪ್ರೇಮಾನಂದ ತಿ.ಲಕ್ಕಣ್ಣನವರ ಉಪನ್ಯಾಸ ನೀಡಿದರು.

ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಮೋಟೆಬೆನ್ನೂರಿನ ಪುಟ್ಟನಗೌಡ ಪಾಟೀಲ, ಚಿಕ್ಕನಾಯಕನಹಳ್ಳಿ ಹಿರಿಯ ದಿವಾನಿ ನ್ಯಾಯಾಧೀಶ ಸತೀಶ ಎಸ್.ಟಿ., ಉಪವಲಯ ಅರಣ್ಯಾಧಿಕಾರಿ ಡಾ.ಜಗದೀಶ ಎಸ್.ಮಹಾರಾಜಪೇಟೆ,  ಬ್ಯಾಡಗಿಯ ಇಂದುಧರಯ್ಯ ಎಂ.ಹಿರೇಮಠ, ಪ್ರಕಾಶ ಬನ್ನಿಹಟ್ಟಿ, ಚಿಕ್ಕಪ್ಪ ಹಾದಿಮನಿ, ಎಂ.ಡಿ. ಚಿಕ್ಕಣ್ಣನವರ, ಕೆ.ಜಿ. ಕುಲಕರ್ಣಿ, ಸಾಯಿಬಾಬಾ ಮಂದಿರ ಧರ್ಮದರ್ಶಿ ಮಂಜಯ್ಯ ಶಾಸ್ತಿç ಪಾಲ್ಗೊಂಡಿದ್ದರು. ಹಲವಾರು ಗಣ್ಯರಿಗೆ ಹಾಗೂ ಸೇವಾ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here