ಚೆನ್ನೈ: 19 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಅಪರಾಧಿಗೆ 90 ಸಾವಿರ ದಂಡದ ಜೊತೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಚೆನ್ನೈ ಮಹಿಳಾ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಧೀಶೆ ಎಂ ರಾಜಲಕ್ಚ್ಮೀ ಅಪರಾಧಿ ಕನಿಷ್ಠ 30 ವರ್ಷಗಳ ಕಾಲ ಜೈಲಿನಲ್ಲಿ ಇರಬೇಕಾಗುತ್ತದೆ ಎಂದು ಹೇಳಿದರು. ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಬೆದರಿಕೆ ಮತ್ತು ಅಪಹರಣ ಸೇರಿದಂತೆ ಎಲ್ಲಾ 11 ಆರೋಪಗಳಲ್ಲಿ ಜ್ಞಾನಶೇಖರನ್ ತಪ್ಪಿತಸ್ಥನೆಂದು ನ್ಯಾಯಾಧೀಶರು ಕಳೆದ ವಾರ ತೀರ್ಪು ನೀಡಿದ್ದರು. ಪ್ರಕರಣದಲ್ಲಿ ಕನಿಷ್ಠ 29 ಸಾಕ್ಷಿಗಳು ಸಾಕ್ಷ್ಯ ನುಡಿದಿದ್ದು, ಪೊಲೀಸರು 100 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ.
ಈ ಘಟನೆ ಕಳೆದ ವರ್ಷ ಡಿಸೆಂಬರ್ 23 ರಂದು ನಡೆದಿದ್ದು, ಜ್ಞಾನಶೇಖರನ್ ವಿಶ್ವವಿದ್ಯಾಲಯಕ್ಕೆ ಹೋಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ. ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಆವರಣದಲ್ಲಿದ್ದಳು. ಜ್ಞಾನಶೇಖರನ್ ವಿದ್ಯಾರ್ಥಿಯ ಸ್ನೇಹಿತನನ್ನು ಥಳಿಸಿ, ಆಕೆಯ ಮೇಲೂ ಹಲ್ಲೆ ನಡೆಸಿದ್ದ. ಆಕೆಯನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ ಘಟನೆಯ ವಿಡಿಯೋ ಕೂಡ ಮಾಡಿದ್ದ. ಅದೇ ದಿನ ಆತನನ್ನು ಬಂಧಿಸಲಾಗಿತ್ತು.
ತನ್ನ ವೃದ್ಧ ತಾಯಿ ಮತ್ತು ಎಂಟು ವರ್ಷದ ಮಗಳನ್ನು ನೋಡಿಕೊಳ್ಳಲು ಮನೆಯಲ್ಲಿಯೇ ಇರಬೇಕಾದ ಅಗತ್ಯವನ್ನು ಉಲ್ಲೇಖಿಸಿ ಕನಿಷ್ಠ ಶಿಕ್ಷೆಗಾಗಿ ಅವನು ಈ ಹಿಂದೆ ಮನವಿ ಮಾಡಿದ್ದನು. ಆದರೆ ಎಲ್ಲಾ ಆರೋಪಗಳಲ್ಲಿ ಅವನ ದೋಷ ಸಾಬೀತಾಗಿರುವುದರಿಂದ, ಅವನಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದರು.