HomeUncategorizedಮಾನವೀಯ ಮೌಲ್ಯವಿಲ್ಲದ ಜೀವನ ನಿರರ್ಥಕ: ಶ್ರೀ ರಂಭಾಪುರಿ ಜಗದ್ಗುರುಗಳು

ಮಾನವೀಯ ಮೌಲ್ಯವಿಲ್ಲದ ಜೀವನ ನಿರರ್ಥಕ: ಶ್ರೀ ರಂಭಾಪುರಿ ಜಗದ್ಗುರುಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ತುಮಕೂರು: ಮಾನವ ಯಾವಾಗಲೂ ಸುಖಾಪೇಕ್ಷಿ. ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ಅವಶ್ಯಕವಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಭಾನುವಾರ ನಗರದ ಶ್ರೀ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟಿನ ಆಶ್ರಯದಲ್ಲಿ ಜರುಗಿದ ಜನ ಜಾಗೃತಿ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಕೋಟಿ ಹಣ ಇದ್ದರೇನು, ಮಾನವೀಯ ಮೌಲ್ಯವಿಲ್ಲದ ಜೀವನ ನಿರರ್ಥಕ. ಜೀವನ ಎಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ. ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನ-ಧರ್ಮ ಎಂಬ ಹುಟ್ಟು ಅವಶ್ಯಕ. ಜ್ಞಾನದಿಂದ ಅಧಿಕಾರ ಸಿಗಬಹುದು. ಆದರೆ ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಬೇಕು. ಅನುಭವ ಜಗತ್ತಿನ ಶ್ರೇಷ್ಠ ಶಿಕ್ಷಕ. ಉಸಿರಿರುವವರೆಗೂ ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಬೇಕು. ಯಾರು ಎಷ್ಟೇ ತುಳಿದರೂ ಗರಿಕೆ ಕೆಲ ಕ್ಷಣಗಳಲ್ಲಿ ಮೊದಲಿನ ಸ್ಥಿತಿಗೆ ಬರುತ್ತದೆ. ಅದು ಯಾವತ್ತೂ ಬೇಸರಿಸಿಕೊಳ್ಳುವುದಿಲ್ಲ ಮತ್ತು ಎದ್ದು ನಿಲ್ಲುವುದನ್ನು ಮರೆಯುವುದಿಲ್ಲ.

ಮನುಷ್ಯನ ಮನೋಭಾವವು ಗರಿಕೆಯಂತಿರಬೇಕು. ಮೂಕನ ಮಾತು ಬೇಗ ಅರ್ಥ ಮಾಡಿಕೊಳ್ಳಬಹುದು. ಆದರೆ ಮುಖವಾಡ ಧರಿಸಿ ಹಿಂದೆ ಮಾತನಾಡುವವರ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಉಜ್ವಲ ಬದುಕಿಗೆ ಜೀವನ ದರ್ಶನದ ಅರಿವನ್ನು ಬೋಧಿಸಿ ಸನ್ಮಾರ್ಗಕ್ಕೆ ಕರೆತಂದ ಘಟನೆಗಳನ್ನು ಕಾಣಬಹುದು. ತುಮಕೂರು ನಗರದಲ್ಲಿ ಹಮ್ಮಿಕೊಂಡ ಧನುರ್ಮಾಸದ ಪೂಜಾ ಹಾಗೂ ಸಮಾರಂಭಗಳು ತಮಗೆ ತೃಪ್ತಿ ತಂದಿವೆ ಎಂದರು.

ಮಾಜಿ ಸಚಿವ ಸೊಗಡು ಶಿವಣ್ಣ, ಎ.ಎಸ್. ಸೋಮಶೇಖರ, ಬಿ.ಎಸ್. ಮಂಜುನಾಥ, ಗಂಗಾಧರ ಶಾಸ್ತಿçಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಸ್.ಶ್ರೀಧರ, ಡಿ.ಎಂ.ರಾಜಶೇಖರ್, ಸಿದ್ಧಪ್ಪ, ರೇಣುಕಾ ಪರಮೇಶ್, ರಾಜೇಶ್ವರಿ ರುದ್ರಪ್ಪ, ನಳಿನಾ ಶಿವಾನಂದ ಮೊದಲಾದ ಗಣ್ಯರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಚಿಂತಕ ಪ್ರಶಾಂತ ರಿಪ್ಪನ್‌ಪೇಟೆ ಅವರು `ಶ್ರೀ ಜಗದ್ಗುರು ಪಂಚಾಚಾರ್ಯ ಪಂಚಸೂತ್ರ’ ಕುರಿತು ಸುದೀರ್ಘ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ-ಶ್ರೀ ಕೇದಾರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಈಚನೂರ ಗ್ರಾಮದಲ್ಲಿ ಫೆಬ್ರುವರಿ ತಿಂಗಳಲ್ಲಿ ಜರುಗುವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಅಂಕನಹಳ್ಳಿ ಗವಿಮಠದ ಶಿವರುದ್ರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು. ನೇತೃತ್ವ ವಹಿಸಿದ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ ಸಂಸ್ಕೃತಿ ಗುರು ಪರಂಪರೆಯ ಮಹತ್ವ ವಿಚಾರಗಳನ್ನು ಪ್ರಸ್ತಾಪಿಸಿದರು. ವೈ.ಕೆ. ಜ್ಯೋತಿ ಸ್ವಾಗತಿಸಿದರು. ಪೂರ್ಣಿಮಾ ಪ್ರಕಾಶ ನಿರೂಪಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷರಾದ ಶಂಕರ ಬಿದರಿ ಮಾತನಾಡಿ, ವೀರಶೈವ ಧರ್ಮದ ಸಂಸ್ಕೃತಿ ಬೆಳೆದುಬಂದ ಪರಂಪರೆ ಅಪೂರ್ವ. ಆಚಾರ್ಯರ ಮತ್ತು ಶರಣರ ಪರಿಶ್ರಮದಿಂದಾಗಿ ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸುತ್ತಾ ಬಂದಿದೆ. ವೀರಶೈವ ಧರ್ಮದಲ್ಲಿ ನೂರಾರು ಒಳಪಂಗಡ ಭೇದ-ಭಾವನೆಯಿಂದಾಗಿ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಒಳ ಪಂಗಡ ಮರೆತು ಎಲ್ಲರೂ ಒಗ್ಗಟ್ಟಿನಿಂದ ಬಾಳುವ ಅವಶ್ಯಕತೆ ಇದೆಯೆಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!