ಕಲಬುರ್ಗಿ:- ಕೇಂದ್ರದ ಯೋಜನೆ ಘೋಷಣೆಗಳಿಗಷ್ಟೇ ಸೀಮಿತ ಎಂದು ಸಚಿವ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕೇಂದ್ರದ ಯೋಜನೆ ಘೋಷಣೆಗಳಿಗಷ್ಟೇ ಸೀಮಿತ. ಎಲ್ಲ ಬಜೆಟ್‌ನಲ್ಲಿಯೂ ಘೋಷಣೆಗಳು ಮಾತ್ರವೇ ಇರುತ್ತವೆಯೇ ಹೊರತು, ಅದರಲ್ಲಿ ಜನರಿಗೆ ಗಣನೀಯವಾಗಿ ಅನುಕೂಲ ಆಗುವಂತಹದ್ದು ಇಲ್ಲ. ಕಾರ್ಮಿಕರು, ಮಹಿಳೆಯರು, ಯುವಕರಿಗೆ, ಆದಾಯ ತೆರಿಗೆ ಪಾವತಿದಾರರು, ಎಸ್‌ಎಂಇ, ಎಂಎಸ್‌ಎಂಇ, ನವೋದ್ಯಮಿಗಳಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದರು.
ಆದಾಯ ತೆರಿಗೆ ಸ್ಲ್ಯಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಜಿಎಸ್‌ಟಿ ಬಗ್ಗೆ, ಆದಾಯ ತೆರಿಗೆ ಬಗ್ಗೆಯೂ ಹೀಗೆ ಮಾತನಾಡಿದ್ದರು. ಈವರೆಗೂ ಅವರು ಟ್ಯಾಕ್ಸೇಷನ್ ಪದ್ದತಿಯನ್ನು ಸರಿಯಾಗಿ ಅಳವಡಿಸಿಕೊಂಡಿಲ್ಲ ಎಂದಿದ್ದಾರೆ.
ಕೇಂದ್ರದ ಯಾವ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಿದೆ? ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯಲ್ಲಿ 9 ವರ್ಷದ ಹಿಂದೆ ನೆರವು ಘೋಷಣೆ ಮಾಡಿದ್ದರು. ಈವರೆಗೂ ಕೊಟ್ಟಿದ್ದು 454 ಕೋಟಿ ರೂ. ಅಷ್ಟೆ. ಅವರು ಅಲಂಕಾರಿಕ ಪದಗಳನ್ನ ಬಳಸಿ ಘೋಷಣೆಗಳನ್ನು ಮಾಡುವುದರಲ್ಲಿ ಮುಂದಿದ್ದಾರೆ. ಆದರೆ ತಳಮಟ್ಟದಿಂದ ಅನುಷ್ಠಾನ ಶೂನ್ಯ ಎಂದು ಅಸಮಾಧಾನ ಹೊರಹಾಕಿದ್ರು.