ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಲ್ಲಿನ ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ 6 ಘಂಟೆಗೆ ಮಳೆಮಲ್ಲೇಶ್ವರ ಲಿಂಗಕ್ಕೆ ಹಾಗೂ ಅನ್ನಪೂರ್ಣೇಶ್ವರಿ ಮೂರ್ತಿಗೆ ಅಭಿಷೇಕ ಹೂವಿನ ಅಲಂಕಾರ ನೆರವೇರಿಸಲಾಯಿತು.
ನಂತರ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಜಂಗಮ ವಟುಗಳಿಗೆ ಸಾಮೂಹಿಕ ಅಯ್ಯಾಚಾರ, ಲಿಂಗದೀಕ್ಷೆಯನ್ನು ನೀಡಿದರು. ಜಂಗಮರು ಶಿವನ ಜ್ಞಾನ ಪಡೆಯಬೇಕಾದರೆ ಮೊದಲು ಅಯ್ಯಾಚಾರ ದೀಕ್ಷೆ ಪಡೆಯಬೇಕು. ಲಿಂಗದೀಕ್ಷೆ, ಸಂಸ್ಕಾರದಿಂದ ಮನುಷ್ಯ ಪರಿಪೂರ್ಣನಾಗುತ್ತಾನೆ. ಅಯ್ಯಾಚಾರದಿಂದ ಮಾನವನ ಪ್ರತಿನಿತ್ಯ ಲಿಂಗಪೂಜೆ ಮಾಡುತ್ತ ಹೋದಂತೆಲ್ಲ ಮನಸ್ಸಿನ ಏಕಾಗ್ರತೆ, ಶಾಂತಿ, ನೆಮ್ಮದಿಯಿಂದ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಮಲ್ಲಿಕಾರ್ಜುನ ಶ್ರೀಗಳು, ಸಂಸ್ಕಾರವಂತರೂ ನಿತ್ಯ ಲಿಂಗಾರ್ಚನೆ ಮಾಡುವ ಮೂಲಕ ಧರ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ದೀಕ್ಷೆ ಪಡೆದ ವಟುಗಳಿಗೆ ಹೊಸಳ್ಳಿಮಠ, ರುದ್ರಮುನಿ ಹಿರೇಮಠ, ಗುರಪಾದಯ್ಯ ಪ್ರಭುಸ್ವಾಮಿಮಠ ಹಾಗೂ ರುದ್ರಯ್ಯ ಸೋಬರದಮಠ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. 9 ಜನ ಜಂಗಮ ವಟುಗಳು ಅಯ್ಯಾಚಾರ ದೀಕ್ಷೆ ಹಾಗೂ 6 ಜನ ಭಕ್ತರು ಲಿಂಗದೀಕ್ಷೆ ಪಡೆದರು.


