ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮಾಜಕ್ಕೆ ದಾನ ಮಾಡಿದವರನ್ನು ನೆನೆಯುವುದು ಅತ್ಯಂತ ಶ್ರೇಯಸ್ಕರ. ಇದರಿಂದ ಮುಂದಿನ ಪೀಳಿಗೆಗೂ ದಾನದ ಮಹತ್ವ ತಿಳಿಯುತ್ತದೆ. ಆದ್ದರಿಂದ ನಾವು ಸಮಯ ದೊರೆತಾಗಲೆಲ್ಲ ಅವರ ಸ್ಮರಣೆಯನ್ನು ವಿವಿಧ ರೂಪದಲ್ಲಿ ಮಾಡುತ್ತೇವೆ ಎಂದು ನರೇಗಲ್ಲ ಹಿರೇಮಠದ ಷ. ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ಶನಿವಾರ ಆಚರಿಸಲಾದ ತ್ಯಾಗವೀರ ಶಿರಸಂಗಿ ಲಿಂಗರಾಜರ 164ನೇ ಜಯಂತ್ಯುತ್ಸವದ ನಿಮಿತ್ತ ಸ್ಥಳೀಯ ಕುಡುವಕ್ಕಲಿಗ ಸಮಾಜದವರು ಏರ್ಪಡಿಸಿದ್ದ ಶ್ರೀ ಸಿದ್ರಾಮೇಶ್ವರ ಮತ್ತು ಶಿರಸಂಗಿ ಲಿಂಗರಾಜರ ಬೃಹತ್ ಮೆರವಣಿಗೆಗೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಚಾಲನೆ ನೀಡಿ ಮಾತನಾಡಿದರು.
ಕರ್ಣನನ್ನು ದಾನವೀರ ಶೂರ ಕರ್ಣ ಎಂದೇ ಕರೆಯುತ್ತಾರೆ. ಇಂದಿನ ಕಲಿಯುಗದಲ್ಲಿ ಸಮಾಜಕ್ಕಾಗಿ ತಮ್ಮದೆಲ್ಲವನ್ನೂ ತ್ಯಾಗ ಮಾಡಿ ತ್ಯಾಗವೀರರೆಂದು ಕರೆಯಿಸಿಕೊಂಡವರು ಶಿರಸಂಗಿಯ ಲಿಂಗರಾಜ ದೇಸಾಯಿಯವರು. ಅವರ ಮೆರವಣಿಗೆ ಸೂಕ್ತವಾಗಿದ್ದು, ಅವರನ್ನು ಸ್ಮರಿಸುವ ಮೂಲಕ ಕುಡುವಕ್ಕಲಿಗರ ಸಮಾಜದವರು ಸ್ತುತ್ಯವಾದ ಕಾರ್ಯ ಮಾಡಿದ್ದಾರೆ ಎಂದರು.
ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯು ಗಜಾನನ ದೇವಸ್ಥಾನ, ಹಳೆ ಬಜಾರ್, ದರಗಾ ಓಣಿಯ ಮೂಲಕ ಹಳೆ ಬಸ್ ನಿಲ್ದಾಣ, ಮುಖ್ಯ ಪೇಟೆ, ಹೊಸ ಬಸ್ ನಿಲ್ದಾಣ, ಕೊಂತಿ ಮಲ್ಲಪ್ಪನ ಗುಡಿಯ ಮೂಲಕ ಮರಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.
ಮೆರವಣಿಗೆಯಲ್ಲಿ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಶಿವಪ್ಪ ಬಂಕದ, ನಿಂಗನಗೌಡ ಲಕ್ಕನಗೌಡ್ರ, ಶರಣಪ್ಪ ಗಂಗರಗೊಂಡ, ಕೆ.ಎಸ್. ಕಳಕಣ್ಣವರ, ಶಿವಕುಮಾರ ಕಳಕಣ್ಣವರ, ಎಂ.ಕೆ. ಗಂಗರಗೊಂಡ, ಬಾಳಪ್ಪ ಸೋಮಗೊಂಡ, ರಮೇಶ ಕಳಕಣ್ಣವರ, ರವಿ ಗಂಗರಗೊಂಡ, ಸೋಮು ಲಕ್ಕನಗೌಡ್ರ, ಬಾಳಪ್ಪ ಕಳಕಣ್ಣವರ, ಶೇಖರಗೌಡ ಲಕ್ಕನಗೌಡ್ರ, ಪ್ರಕಾಶ ಹಕ್ಕಿ, ಕಲ್ಲಪ್ಪ ಗೋಸಗೊಂಡ, ಮಲ್ಲನಗೌಡ ಪಾಟೀಲ ಮುಂತಾದವರಿದ್ದರು.