ಗದಗ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಗರ್ಭಿಣಿ ಮಹಿಳೆಯ ಮರ್ಯಾದಾ ಹತ್ಯೆ ಪ್ರಕರಣವನ್ನು ಖಂಡಿಸಿ ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ವಿವಿಧ ಲಿಂಗಾಯತ, ಪ್ರಗತಿಪರ, ಮಹಿಳಾ ಹಾಗೂ ದಲಿತಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿ, ಈ ಘಟನೆಯನ್ನು ಲಿಂಗಾಯತ ಪರಂಪರೆಯ ಮೇಲಿನ ಕಳಂಕ ಎಂದು ಕರೆದವು. ಪ್ರತಿಭಟನೆಯಲ್ಲಿ ಡಿ.ಆರ್. ಪಾಟೀಲ್, ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ, ಸಮಾಜದಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ಹಿಂಸೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೆಳ ಜಾತಿಯ ಯುವಕನನ್ನು ಮದುವೆಯಾದ ಒಂದೇ ಕಾರಣಕ್ಕೆ ಗರ್ಭಿಣಿ ಮಾನ್ಯ ಪಾಟೀಲ್ ಅವರನ್ನು ಹತ್ಯೆ ಮಾಡಿರುವುದು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ. ಲಿಂಗಾಯತ ಧರ್ಮದಲ್ಲಿ ಜಾತಿಯೇ ಇಲ್ಲ ಎಂಬ ಬಸವ ತತ್ವವನ್ನು ಮರೆತ ಪರಿಣಾಮವೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಈಗಾಗಲೇ ಗೃಹ ಸಚಿವರು, ಶಾಸಕರು ಹಾಗೂ ಹಲವು ನಾಯಕರು ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಆದರೆ ಕೇವಲ ಸಾಂತ್ವಾನ ಸಾಲದು. ಮರ್ಯಾದಾ ಹತ್ಯೆಗಳನ್ನು ತಡೆಗಟ್ಟಲು ಸರ್ಕಾರ ವಿಶೇಷ ಕಾನೂನು ರೂಪಿಸಿ ತಕ್ಷಣ ಜಾರಿಗೆ ತರಬೇಕು ಎಂದು ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲಾಯಿತು.



