ಲಿಂಗಾಯತ ಸ್ವತಂತ್ರ ಧರ್ಮವಾಗಬೇಕಿದೆ: ಡಾ. ಬಸವಲಿಂಗ ಪಟ್ಟದೇವರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವೀರಶೈವ ಮತ್ತು ಲಿಂಗಾಯತ ಇವೆರಡೂ ಒಂದೇ. ಕರ್ನಾಟಕದಲ್ಲಿ ಇರುವವರೆಲ್ಲರೂ ಲಿಂಗಾಯತರೇ ಆಗಿದ್ದಾರೆ. ಆದರೆ ಜ್ಞಾನದ ಕೊರತೆಯಿಂದ ಕೆಲವರು ತಮ್ಮನ್ನು ತಾವು ವೀರಶೈವರು ಎಂದುಕೊಳ್ಳುತ್ತಿದ್ದಾರೆ ಎಂದು ಡಾ. ಬಸವಲಿಂಗ ಪಟ್ಟದೇವರು ಅಭಿಪ್ರಾಯಪಟ್ಟರು.

Advertisement

ಇಲ್ಲಿನ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ವೀರಶೈವ ಎನ್ನುವುದು ಶೈವ ಧರ್ಮದ ಒಂದು ಶಾಖೆ. ಲಿಂಗಾಯತ ಧರ್ಮದಲ್ಲಿ 99 ಉಪ ಪಂಗಡಗಳಿವೆ. ಆ ಪಂಗಡಗಳಲ್ಲಿ ವೀರಶೈವವೂ ಒಂದು. ನಾಡಿನ 400ಕ್ಕೂ ಹೆಚ್ಚು ಮಠಾಧೀಶರು ನಾವೆಲ್ಲರೂ ಲಿಂಗಾಯತರು ಎಂದು ಒಪ್ಪಿಕೊಂಡಿದ್ದಾರೆ. ಲಿಂಗಾಯತ ಧರ್ಮವನ್ನು ಪ್ರತ್ಯೇಕ ಎಂದು ಗುರುತಿಸಲು ಹೋರಾಟ ನಡೆಯುತ್ತಿದೆ. ಇದರ ಮುಖ್ಯ ಕಾರಣ, ವೈದಿಕ ಧರ್ಮದ ಚಾತುರ್ವರ್ಣ ಪದ್ಧತಿಯಲ್ಲಿ ಇಲ್ಲದ ಸಮಾನತೆಯನ್ನು ಲಿಂಗಾಯತ ಧರ್ಮ ಪ್ರತಿಪಾದಿಸುತ್ತದೆ. ಬಸವಣ್ಣನವರು ಕೆಳವರ್ಗದ ಜನರಿಗೆ ಸಮಾನತೆ ಮತ್ತು ಸ್ವಾತಂತ್ರ‍್ಯವನ್ನು ನೀಡಿದರು. ಹೆಣ್ಣು ಮತ್ತು ಗಂಡಿನ ನಡುವೆ ಯಾವುದೇ ಭೇದಭಾವವಿಲ್ಲ ಎಂದು ಅವರು ಸಾರಿದರು. ಈ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕಿದೆ ಎಂದರು.

ಇಸ್ಲಾಂ ಧರ್ಮವನ್ನು ಪ್ರವಾದಿ ಮುಹಮ್ಮದ ಪೈಗಂಬರ್ ಪರಿಚಯಿಸಿದರು. ಕ್ರೈಸ್ತ್ ಧರ್ಮವನ್ನು ಜೀಸಸ್ ಸ್ಥಾಪಿಸಿದರು. ಅದೇ ರೀತಿ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು. ಲಿಂಗಾಯತ ಧರ್ಮಕ್ಕೂ ಅದರದೇ ಆದ ಆಚರಣೆಗಳಿವೆ. ಹೀಗಾಗಿ ಆಯಾ ಧರ್ಮದವರು ತಮ್ಮ ತಮ್ಮ ಧರ್ಮವನ್ನು ಪಾಲನೆ ಮಾಡುತ್ತಾ ಸಹೋದರತೆಯಿಂದ ಬಾಳಬೇಕು ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಸಮಾರಂಭದಲ್ಲಿ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಬೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಚಂದ್ರಶೇಖರ ದೇವರು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಶಿವಕುಮಾರಗೌಡ ಪಾಟೀಲ, ಕೆ.ಎಸ್. ಚೆಟ್ಟಿ, ಶೇಖಣ್ಣ ಕವಳಿಕಾಯಿ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಬಸವಣ್ಣನವರ ಕೊಡುಗೆಗಳು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಗಾಧವಾಗಿವೆ. ಅವರು ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟವರು. ಸ್ತ್ರೀ ಶೋಷಣೆ, ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ತೊಡೆದುಹಾಕಲು ಹೋರಾಡಿದರು. ಅವರು ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ತಂದರು. ಈ ಕಾರಣಕ್ಕಾಗಿ ಅವರನ್ನು ಕನ್ನಡಿಗರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ ಎಂದು ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಸವಣ್ಣನವರು ಪ್ರತಿಪಾದಿಸಿದ ಅಷ್ಟಾವರಣಗಳು ಎಂಟು ರಕ್ಷಾಕವಚಗಳು. ಇವು ನಮ್ಮ ಅವಗುಣಗಳನ್ನು ನಿವಾರಿಸಲು ಮತ್ತು ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷಿ ಮತ್ತು ಮಂತ್ರ. ಬಸವಣ್ಣನವರ ಮತ್ತೊಂದು ಪ್ರಮುಖ ತತ್ವವೆಂದರೆ, `ಕಾಯಕವೇ ಕೈಲಾಸ‘. ಇದರರ್ಥ ನಾವು ಮಾಡುವ ಕೆಲಸದಲ್ಲಿ ಸಂತೋಷ, ತೃಪ್ತಿ ಮತ್ತು ಪ್ರಾಮಾಣಿಕತೆ ಇದ್ದರೆ, ಅದೇ ಕೈಲಾಸಕ್ಕೆ ಸಮಾನ. ಅವರು ಕೆಲಸವನ್ನು ಪೂಜೆಯೆಂದು ಭಾವಿಸಲು ಪ್ರೇರೇಪಿಸಿದರು.

– ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.

ಸಾಣೆಹಳ್ಳಿ.


Spread the love

LEAVE A REPLY

Please enter your comment!
Please enter your name here