HomeGadag Newsಲಿಂಗಾಯತರು ‘ಲಿಂಗಾಯತ ಧರ್ಮ’ ಎಂದು ಬರೆಸಿರಿ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ಲಿಂಗಾಯತರು ‘ಲಿಂಗಾಯತ ಧರ್ಮ’ ಎಂದು ಬರೆಸಿರಿ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಸರಕಾರ ಜಾತಿಗಣತಿ ಪ್ರಾರಂಭಿಸಿದ್ದು, ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮೀಕ್ಷೆ ಮಾಡುವುದು ಇದರ ಉದ್ದೇಶವಾಗಿದೆ. ತರಾತುರಿಯಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯಿಂದಾಗಿ ಜನರಲ್ಲಿ, ವಿಶೇಷವಾಗಿ ಲಿಂಗಾಯತರಲ್ಲಿ ಸಾಕಷ್ಟು ಗೊಂದಲವುಂಟಾಗಿದೆ. ಸಣ್ಣ ಸಣ್ಣ ಸಮುದಾಯಗಳು ಲಿಂಗಾಯತ ಧರ್ಮದಿಂದ ದೂರ ಸರಿಯುತ್ತಿರುವ ಈ ಸಂದರ್ಭದಲ್ಲಿ ಅಖಂಡ ಲಿಂಗಾಯತ ಸಮಾಜವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಪ್ರತಿಷ್ಠೆಯನ್ನು ಬದಿಗಿರಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ ಎಂದು ಗದಗ-ಡಂಬಳ ಜಗದ್ಗುರು ತೋಂಟದಾರ್ಯಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಸಂವಿಧಾನದ ಕಲಂ 25ರ ಪ್ರಕಾರ ದೇಶದಲ್ಲಿ ಪ್ರಚಲಿತದಲ್ಲಿರುವ ಎಲ್ಲ ಧರ್ಮಗಳನ್ನು ಮಾನ್ಯ ಮಾಡಬೇಕಾಗಿರುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಈ ಕಾರಣಕ್ಕಾಗಿಯೇ ಜನಗಣತಿ ಫಾರ್ಮ್‌ನ 8ನೇ ಕಾಲಂನ 11ನೇ ಉಪಕಾಲಂನಲ್ಲಿ ‘ಇತರೆ’ ಎಂದು ಪ್ರತ್ಯೇಕ ಕಾಲಂ ಮೀಸಲಾಗಿರಿಸಿದೆ. ಇಲ್ಲಿ ‘ಲಿಂಗಾಯತ ಧರ್ಮ’ ಎಂದು ಬರೆಯಲು ಗಣತಿದಾರರಿಗೆ ಸೂಚಿಸಬೇಕು. ಇತ್ತೀಚೆಗೆ ಅನೇಕ ಮಠಾಧಿಪತಿಗಳು ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯವರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಬಾರದು ಎಂದೂ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಈ ವಿಷಯವನ್ನು ಲಿಂಗಾಯತರ ವಿವೇಚನೆಗೆ ಬಿಟ್ಟಿರುವುದನ್ನು ಎಲ್ಲರೂ ಗಮನಿಸಿ 8ನೇ ಧರ್ಮದ ಕಾಲಂನಲ್ಲಿ ‘ಲಿಂಗಾಯತ ಧರ್ಮ’ ಎಂದೇ ಬರೆಸಬೇಕು.

9ನೇ ಜಾತಿ ಕಾಲಂನಲ್ಲಿ ವೀರಶೈವರು ‘ವೀರಶೈವ’ ಎಂದು, ವೀರಶೈವ ಲಿಂಗಾಯತರು ವೀರಶೈವ ಲಿಂಗಾಯತರೆಂದು, ಲಿಂಗಾಯತದ ಬೇರೆ ಬೇರೆ ಪಂಗಡದವರು ತಮ್ಮ ತಮ್ಮ ಜಾತಿಗಳ ಹೆಸರನ್ನು ಲಿಂಗಾಯತ ಪಂಚಮಸಾಲಿ, ಲಿಂಗಾಯತ ಕುಡುವಕ್ಕಲಿಗ, ಲಿಂಗಾಯತ ಬಣಜಿಗ, ಲಿಂಗಾಯತ ರೆಡ್ಡಿ ಇತ್ಯಾದಿ ಬರೆಸಬೇಕು. ಜಾತಿಗಳಲ್ಲಿ ಉಪಜಾತಿಗಳಿದ್ದರೆ ಉಪಜಾತಿ ಕಾಲಂನಲ್ಲಿ ಅವುಗಳನ್ನು ನಮೂದಿಸಬಹುದು. ಇದರಿಂದ ಲಿಂಗಾಯತರ ಜನಸಂಖ್ಯೆಯನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದು.

‘ಲಿಂಗಾಯತ’ ಒಂದು ವಿಶಿಷ್ಟ ಧರ್ಮ. ವಿವಿಧ ಕಾಯಕಗಳನ್ನು ಮಾಡುವ ಪಂಗಡಗಳನ್ನು ಇಂದು ಜಾತಿಗಳೆಂದು ಗುರುತಿಸಲಾಗುತ್ತಿದ್ದರೂ ಎಲ್ಲರಿಗೂ ದೊರೆಯುವ ಸಂಸ್ಕಾರ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಏನೂ ವ್ಯತ್ಯಾಸವಿಲ್ಲ. ಸ್ತ್ರೀ-ಪುರುಷರಿಬ್ಬರಿಗೂ ಸಮಾನ ಧಾರ್ಮಿಕ ಸ್ವಾತಂತ್ರ್ಯವಿದೆ. ಕಾಯಕ-ದಾಸೋಹ ತತ್ತ್ವಗಳ ಅಡಿಯಲ್ಲಿ ಈ ಧರ್ಮ ಬಸವಾದಿ ಶರಣರಿಂದ ರೂಪುಗೊಂಡಿದೆ. ಸಮಾನತೆ ಈ ಧರ್ಮದ ಮೂಲ ಆಶಯ. ಸಕಲ ಜೀವಿಗಳಿಗೆ ಲೇಸ ಬಯಸುವುದೇ ಇದರ ಉದ್ದೇಶ. ಈ ಧರ್ಮಾನುಯಾಯಿಗಳು ಜಗತ್ತಿನಲ್ಲಿಯೇ ಒಂದು ವಿಶಿಷ್ಟ ಜನಾಂಗ. ಇವರ ಸಂಸ್ಕೃತಿಯೂ ವೈಶಿಷ್ಟ್ಯಪೂರ್ಣ. ಈ ಜನಾಂಗದ ಅಸ್ಮಿತೆ ಕಣ್ಮರೆಯಾಗಬಾರದು. ಈ ಜನಾಂಗ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಲಿಂಗಾಯತನ ಕರ್ತವ್ಯವಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಸಮಾರೋಪ ಸಮಾರಂಭ
ಸೆ. 1ರಿಂದ ಬಸವಜನ್ಮಭೂಮಿ ಬಸವನಬಾಗೇವಾಡಿಯಿಂದ ಪ್ರಾರಂಭಗೊಂಡ ‘ಬಸವ ಸಂಸ್ಕೃತಿ ಅಭಿಯಾನವು’ ಬರುವ ಅಕ್ಟೋಬರ್ 5ರಂದು ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ (ಗಾಯತ್ರಿವಿಹಾರ ಗೇಟ್ ನಂ. 4) ಬೆಳಿಗ್ಗೆ 11 ಗಂಟೆಗೆ ಸಮಾರೋಪಗೊಳ್ಳಲಿದೆ. ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳನ್ನು ಸುತ್ತಿ ಬಸವಾದಿ ಶರಣರ ತತ್ತ್ವದರ್ಶಗಳನ್ನು ಜನಮನಕ್ಕೆ ತಲುಪಿಸುವಲ್ಲಿ ಅಭಿಯಾನವು ಯಶಸ್ವಿಯಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿಶೇಷವಾಗಿ ಭಾಗವಹಿಸುವ ಈ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಎಲ್ಲ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರೋಪ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಶ್ರೀಗಳು ತಿಳಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!