ಶ್ರೀಗಳ ಪ್ರವಚನವನ್ನು ಕೇಳಿ ಪುನೀತರಾಗಿ: ಉಮೇಶ ಪಾಟೀಲ

0
Oplus_16908290
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪುರಾಣ-ಪುಣ್ಯ ಕಥೆಗಳು ನಮ್ಮ ಬದುಕಿಗೆ ದಾರಿದೀಪಗಳಾಗಿವೆ. ಇವುಗಳನ್ನು ಶ್ರವಣ ಮಾಡುವುದರಿಂದ ನಮ್ಮ ಮನದ ಕ್ಲೇಶಗಳು ದೂರಾಗುತ್ತವೆ. ದೂರದರ್ಶನದಲ್ಲಿ ಬರುವ ಧಾರಾವಾಹಿಗಳನ್ನು ನೋಡುವುದರಿಂದ ನಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಬದಲಾಗಿ ಪೌರಾಣಿಕ ಧಾರಾವಾಹಿಗಳನ್ನು ನೋಡಿ ಮನೆಯಲ್ಲಿ ಸಂಸ್ಕಾರಯುತ ವಾತಾವರಣವಿರುವಂತೆ ನೋಡಿಕೊಳ್ಳಿ ಎಂದು ಹಿರೇಅಳಗುಂಡಿಯ ಚನ್ನು ಪಾಟೀಲ ಫೌಂಡೇಶನ್ ಸಂಸ್ಥಾಪಕ ಉಮೇಶ ಪಾಟೀಲ ಹೇಳಿದರು.

Advertisement

ಪಟ್ಟಣದಲ್ಲಿ ನಡೆದಿರುವ ಹಿರೇಮಠದ ಜಾತ್ರಾ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿಯನ್ನು ಹೇಳುವುದರಲ್ಲಿ ನಾಡಿನಲ್ಲಿಯೇ ಪ್ರಸಿದ್ಧರು ಎಂದು ಕೇಳಿ ತಿಳಿದಿದ್ದೇನೆ. ಇಂತಹ ರತ್ನವನ್ನು ಪಡೆದುಕೊಂಡಿರುವ ನೀವೇ ಧನ್ಯರು. ಇಲ್ಲೊಂದು ಹಿರೇಮಠವಿದೆ, ಇಲ್ಲಿನ ಸ್ವಾಮೀಜಿ ಪ್ರವಚನ ಪ್ರವೀಣರು ಎಂದು ತಿಳಿದು ನನಗೆ ಅತ್ಯಂತ ಸಂತೋಷವಾಗಿದೆ ಎಂದು ಹೇಳಿದ ಪಾಟೀಲ, ನಿತ್ಯವೂ ಬಂದು ಇಲ್ಲಿನ ಕಾರ್ಯಕ್ರಮಗಳನ್ನು ವೀಕ್ಷಿಸುವುದರ ಜೊತೆಗೆ ಶ್ರೀಗಳವರ ಪ್ರವಚನವನ್ನು ಕೇಳಿ ಪುನೀತರಾಗಿರಿ ಎಂದರು.

ಡಾ. ಎನ್.ಎಲ್. ಗ್ರಾಮಪುರೋಹಿತ ಮಾತನಾಡಿ, ಹರ ಮುನಿದರೆ ಗುರು ಕಾಯುವರು ಎಂಬ ಮಾತೊಂದಿದೆ. ನಮಗೆ ಗುರುಗಳ ರೂಪದಲ್ಲಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ದೊರಕಿದ್ದಾರೆ. ಅವರ ನುಡಿಗಳನ್ನು ಕೇಳುವ ಸೌಭಾಗ್ಯ ನಮಗೆ ಸಿಕ್ಕಿದೆ. ಈ ಅವಕಾಶವನ್ನು ನಾವು ಸದುಪಯೋಗಪಡಿಸಿಕೊಳ್ಳೋಣ. ನಮ್ಮಲ್ಲಿ ಮೊದಲು ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಮಾನವತೆಯಿಂದ ಬದುಕೋಣ. ಇಲ್ಲದಿದ್ದರೆ ನಾವು ಪಶುವಿಗೆ ಸಮಾನರಾಗುತ್ತೇವೆ. ನಾವೇ ಹೀಗಾದರೆ ನಮ್ಮ ಮುಂದಿನ ಪೀಳಿಗೆ ಅದಕ್ಕಿಂತಲೂ ಕಡೆಯಾಗುತ್ತದೆ. ಅದಕ್ಕೆ ನೀವೆಂದಿಗೂ ಅವಕಾಶ ಕೊಡಬೇಡಿ ಎಂದರು.

ಮಲ್ಲಿಕಾರ್ಜುನ ಶ್ರೀಗಳವರು ಶ್ರೀ ವೀರಭದ್ರೇಶ್ವರ ಪುರಾಣದಲ್ಲಿನ ಕೆಲವಷ್ಟು ಭಾಗವನ್ನು, ಸಿದ್ಧಾಂತ ಶಿಖಾಮಣಿಯಲ್ಲಿನ ಮಹತ್ವದ ಅಂಶಗಳ ಬಗ್ಗೆ ಪ್ರವಚನ ನೀಡಿದರು. ವೇದಿಕೆಯ ಮೇಲೆ ನಿವೃತ್ತ ಶಿಕ್ಷಕ ಬಿ.ಬಿ. ಮಲ್ಲನಗೌಡ್ರ, ರಾಜು ಮಣ್ಣೊಡ್ಡರ, ನಾರಾಯಣ ವಡ್ಡಟ್ಟಿ, ಕಳಕನಗೌಡ ಪೊಲೀಸ್‌ಪಾಟೀಲ ಉಪಸ್ಥಿತರಿದ್ದರು. ಈಶ್ವರ ಬೆಟಗೇರಿ ನಿರ್ವಹಿಸಿದರು.

ಡಾ. ಕೃಷ್ಣ ಕಾಳೆ ಮಾತನಾಡಿ, ನರೇಗಲ್ಲ ಪಟ್ಟಣದಲ್ಲಿ ಏನಾದರೂ ಸಾಂಸ್ಕೃತಿಕ ವಾತಾವರಣ ಉಳಿದಿದೆ ಎಂದರೆ ಅದು ಇಲ್ಲಿನ ಶ್ರೀ ಹಿರೇಮಠದಿಂದ ಮತ್ತು ಇಲ್ಲಿನ ಕೆಲವು ಸಂಘಟನೆಗಳು ನಡೆಸುತ್ತಿರುವ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಿಂದ. ಇಲ್ಲಿ ಬಂದಿರುವ ತಾಯಂದಿರು ನಿಮ್ಮ ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಪ್ರಯತ್ನಿಸಿ. ಮಕ್ಕಳೂ ಸಹ ತಮ್ಮ ತಂದೆ-ತಾಯಿಗಳನ್ನು ಗೌರವಿಸುವದರ ಜೊತೆಗೆ, ಅವರ ಮಾತುಗಳಿಗೆ ಕಿವಿಗೊಡುವುದನ್ನು ಕಲಿಯಬೇಕು. ಜೀವನ ಬಹಳಷ್ಟು ದಿನಗಳದ್ದಲ್ಲ ಎಂಬುದನ್ನು ನೆನಪಿಡಿ. ದುಶ್ಚಟಕ್ಕೆ ಬಿದ್ದು ಹಾಳು ಮಾಡಿಕೊಳ್ಳುವ ಬದಲು ಗುರು-ಹಿರಿಯರ ಮಾತುಗಳನ್ನು ಕೇಳಿ. ಇದರಿಂದ ನಿಮ್ಮ ಜೀವನಕ್ಕೊಂದು ಅರ್ಥ ಬರುತ್ತದೆ ಎಂದರು.

 


Spread the love

LEAVE A REPLY

Please enter your comment!
Please enter your name here