ಸಾಹಿತ್ಯ ಜ್ಞಾನ ಎದೆಯ ಆಳಕ್ಕಿಳಿಯಲಿ: ಶಾಸಕ ಜಿ.ಎಸ್. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಸಾಹಿತ್ಯ ಸಮ್ಮೇಳನ ಎಂದರೆ ಅದೊಂದು ವಿಶಿಷ್ಟ ಬಗೆಯ ಸಂಭ್ರಮ. ಅದರಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನ ಎಂದಾಕ್ಷಣ ನಮ್ಮ ಮೈಮನಗಳೆಲ್ಲ ರೋಮಾಂಚನವಾಗುತ್ತದೆ. ಹೇಳಿ ಕೇಳಿ ಮುದ್ರಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಗದಗ ಜಿಲ್ಲೆಯ ಗಜೇಂದ್ರಗಡದ ಕನ್ನಡದ ತವರಿನಲ್ಲಿ ಜ.20, 21ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಪಾಲಗೊಳ್ಳಬೇಕು. ಏಕೆಂದರೆ ಕನ್ನಡದ ಉಳಿವು ಇರುವುದೇ ಅದರ ಬಳಕೆಯಲ್ಲಿ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದಿನ ಜನಾಂಗ ಆಂಗ್ಲ ಭಾಷೆಯ ಮೊರೆ ಹೋಗುತ್ತಿರುವುದರಿಂದ ಮುಂದಿನ ಜನಾಂಗ ಕನ್ನಡವನ್ನು ಮರೆತುಬಿಡುವ ಅಪಾಯವಿದೆ. ಹಾಗಾಗಿ ನಮ್ಮ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಯುವ ಜನಾಂಗ ಮತ್ತು ಪುಟ್ಟ ಮಕ್ಕಳಲ್ಲಿ ಭಾಷಾ ಪ್ರೀತಿಯನ್ನು ಹೆಚ್ಚು ಬೆಳೆಸುವಂತೆ ಆಗಬೇಕು. ಕನ್ನಡ ಎಂದಾಕ್ಷಣ ಅದು ನನ್ನದು, ನನ್ನ ತಾಯಿ ಭಾಷೆ ಎನ್ನುವ ಅಭಿಮಾನ, ಹೆಮ್ಮೆ ಮೈದೋರುವಂತೆ ಸಾಹಿತ್ಯ ಸಮ್ಮೇಳನ ರೂಪುಗೊಳ್ಳಬೇಕು.

ಯಾವುದೇ ಭಾಷೆಯ ಮೇಲೆ ಪ್ರೀತಿ ಇರದಿದ್ದರೆ, ಬಳಸದಿದ್ದರೆ ಅದು ಬೆಳೆಯುವುದಿಲ್ಲ. ಹಾಗೆ ಬೆಳೆಯಬೇಕಾದರೆ ನಾವೆಲ್ಲ ಒಮ್ಮನದಿಂದ ಇಂತಹ ಸಮ್ಮೇಳನಗಳಲ್ಲಿ ಪಾಲ್ಗೊಂಡು ನಮ್ಮ ಭಾಷಾ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ಹೋಗಬೇಕಾಗಿದೆ. ಹಾಗೆ ಭಾಷಾಜ್ಞಾನ ವಿಸ್ತರಿಸುವ ವಿಚಾರಗಳು ಸಮ್ಮೇಳನದಲ್ಲಿ ಚರ್ಚಿತವಾಗತ್ತವೆ ಎನ್ನುವ ಆಶಾ ಭಾವನೆಯಿದೆ. ಭಾಷಾಜ್ಞಾನ ಮಾತ್ರವಲ್ಲದೆ ಸಾಹಿತ್ಯ ಜ್ಞಾನವೂ ಎದೆಯ ಆಳಕ್ಕಿಳಿಯಬೇಕು.

ಹಾಗೆಯೇ ಸಾಹಿತ್ಯ ಎನ್ನುವುದು ಎದೆಗೆ ಇಳಿದಾಗ ಸಹೃದಯತೆ, ಸಂಸ್ಕಾರ ತಾನೇ ತಾನಾಗಿ ಮೈದಾಳುತ್ತದೆ. ಹಾಗೆ ಎದೆಗೆ ಸಂಸ್ಕಾರ ನೀಡುವಂತಹ ಅಕ್ಷರ ಪ್ರೀತಿಯನ್ನು ಈ ಸಮ್ಮೇಳನ ನೀಡುವಂತಾಗಲಿ ಎಂಬುದು ನಮ್ಮೆಲ್ಲರ ಸದಾಶಯ. ಹಾಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ. ಕನ್ನಡವನ್ನು ಉಳಿಸೋಣ, ಬೆಳೆಸೊಣ. ಅದರಲ್ಲಿ ಮಿಂದು ತಲ್ಲೀನರಾಗೊಣ ಬನ್ನಿ. ಕನ್ನಡನಾಡಿನ ಕನ್ನಡವನ್ನು ಗಜೇಂದ್ರಗಡದಲ್ಲಿ ಯಶಸ್ವಿಯಾಗಿಸೊಣ ಎಂದು ಶಾಸಕ ಜಿ.ಎಸ್. ಪಾಟೀಲರು ಕರೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here