ವಿಜಯಸಾಕ್ಷಿ ಸುದ್ದಿ, ಧಾರವಾಡ: ಪ್ರಸ್ತುತ ದಿನದಲ್ಲಿ ಬಹುತೇಕ ಸಾರ್ವಜನಿಕರಿಗಾಗಲಿ, ಸರ್ಕಾರಿ ನೌಕರರೇ ಆಗಿರಲಿ, ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ. ಅದಕ್ಕಾಗಿಯೇ ದಿನದಿನಕ್ಕೆ ಸೈಬರ್ ವಂಚನೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ಆರ್ಥಿಕ ವಂಚನೆ, ಸೈಬರ್ ಕ್ರೈಮ್, ಡಿಜಿಟಲ್ ಅರೆಸ್ಟ್ ಮತ್ತು ಕೆಜಿಐಡಿ ಸೌಲಭ್ಯಗಳ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಪೊಲೀಸ್ ಅಧಿಕಾರಿ, ಸಿಐಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಶಿವಾನಂದ ಕಟಗಿ ಮಾತನಾಡಿ, ಇಂದಿನ ಕಾಲದಲ್ಲಿ ಸೈಬರ್ ಜಾಗೃತಿ ಅತ್ಯಂತ ಅಗತ್ಯವಾದ ಒಂದು ಕೌಶಲ್ಯವಾಗಿದೆ. ಮಾನವೀಯ ಸಂಬಂಧಗಳು, ಬ್ಯಾಂಕಿಂಗ್ ವ್ಯವಸ್ಥೆಗಳು, ವ್ಯಾಪಾರ-ವ್ಯವಹಾರಗಳು ಎಲ್ಲವೂ ಡಿಜಿಟಲ್ ಆಗುತ್ತಿರುವ ಈ ಯುಗದಲ್ಲಿ ವಂಚನೆಗಳ ರೂಪವೇ ಬದಲಾಗಿದೆ. ನಾವು ಜಾಗೃತರಾಗಿರದಿದ್ದರೆ, ಅಪರಾಧಿಗಳು ಕೆಲವೇ ಕ್ಷಣಗಳಲ್ಲಿ ನಮ್ಮ ಸಂಪೂರ್ಣ ಹಣವನ್ನು ದೋಚಬಹುದು ಎಂದು ಹೇಳಿದರು.
ಸೈಬರ್ ಅಪರಾಧದಿಂದ ವಂಚಿತರಾದವರು ಕೇವಲ ಶೇ. 10ರಷ್ಟು ಜನ ಮಾತ್ರ ದೂರನ್ನು ದಾಖಲಿಸುತ್ತಾರೆ. ಆದರೆ ಸಣ್ಣ ಮೊತ್ತ ಕಳೆದುಕೊಂಡವರು, ಓಟಿಪಿ ವರ್ಗಾಯಿಸಿದವರು, ಅನಾಮಧೇಯ ಕರೆಗಳಿಂದ ಹಣ ಕಳೆದುಕೊಂಡು ವಂಚಿತರಾದವರು ಯಾವುದೇ ದೂರುಗಳನ್ನು ಕೊಡುವುದಿಲ್ಲ ಎಂದು ಅವರು ತಿಳಿಸಿದರು.
ಕೆಜಿಐಡಿ ಜಿಲ್ಲಾ ವಿಮಾ ಅಧಿಕಾರಿ ಜೆ.ಸಿ. ಕಠಾರಿ ಅವರು ಕೆಜಿಐಡಿ ವಿಮೆ, ವಂತಿಗೆ, ಬೋನಸ್, ಲಾಭ ಮತ್ತು ಹೂಡಿಕೆ ಕುರಿತು ವಿವರಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೆದಾರ ಕೆ. ಶ್ರೀಧರ ಸ್ವಾಗತಿಸಿದರು. ಮಲ್ಲಿಕಾರ್ಜುನ ಸೊಲಗಿ ಕಾರ್ಯಕ್ರಮ ನಿರೂಪಿಸಿದರು. ಡಾ. ಸುರೇಶ ಹಿರೇಮಠ ವಂದಿಸಿದರು.
ನಕಲಿ ಕಸ್ಟಮ್ಸ್, ಸಿಬಿಐ, ಸೈಬರ್ ಕ್ರೈಮ್, ಪೊಲೀಸ್ ಅಧಿಕಾರಿ ಎಂದು ಕರೆ ಮಾಡುವ ಮೂಲಕ ನಿಮ್ಮ ಮೇಲೆ ಪ್ರಕರಣವಿದೆ, ಹಣಕಾಸು ಗೊಂದಲವಿದೆ, ವೀಡಿಯೋ ಕಾಲ್ ಮೂಲಕ ವಿಚಾರಣೆ ನಡೆಯುತ್ತದೆ ಎಂದು ಹೇಳಿ ಜನರನ್ನು ಹೆದರಿಸುತ್ತಿದ್ದಾರೆ. ಆ ರೀತಿ ಕಾನೂನಿನಲ್ಲಿ ಇಲ್ಲ. ಪೊಲೀಸರು ದೂರವಾಣಿ ಅಥವಾ ವೀಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ. ಯಾವುದೇ ಶಂಕೆ ಬಂದರೆ, ತಕ್ಷಣ 112 ಅಥವಾ ಸೈಬರ್ ಹೆಲ್ಪ್ಲೈನ್ 1930 ಅನ್ನು ಸಂಪರ್ಕಿಸಿ ಎಂದು ಡಿವೈಎಸ್ಪಿ ಶಿವಾನಂದ ಕಟಗಿ ನೌಕರರಿಗೆ ಮನವಿ ಮಾಡಿದರು.



