ದಾವಣಗೆರೆ: ಜಿಲ್ಲೆಯಲ್ಲಿ ಮನಮುಟ್ಟುವ ಘಟನೆ ನಡೆದಿದೆ. ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ 3.5 ವರ್ಷದ ಬಾಲಕ ಹಿತಾರ್ಥ್ ಕನಸನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಾಕಾರಗೊಳಿಸಲಾಯಿತು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪ್ರಭು–ಅನುಷಾ ದಂಪತಿಯ ಪುತ್ರ ಹಿತಾರ್ಥ್ಗೆ 1.5 ವರ್ಷದಾಗಿಯೇ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಕಳೆದ 2 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಮಣಿಪಾಲ್ ಆಸ್ಪತ್ರೆ ನಲ್ಲಿ 8 ತಿಂಗಳು ನಿರಂತರ ಚಿಕಿತ್ಸೆ ಪಡೆದಿದ್ದಾನೆ. ಈಗಾಗಲೇ 80% ಚೇತರಿಕೆ ಕಂಡಿದ್ದರೂ ಕುಟುಂಬದ ಆತಂಕ ಕಡಿಮೆಯಾಗಿಲ್ಲ.
ಮಗ ಪೊಲೀಸ್ ಅಧಿಕಾರಿಯಾಗಬೇಕು ಎಂಬ ತಂದೆಯ ಕನಸಿಗೆ ಸ್ಪಂದಿಸಿದ ಎಸ್ಪಿ ಶೇಖರ್ ಹೆಚ್ ಟಿ, ಖಾಕಿ ಉಡುಪಿನಲ್ಲಿ ಬಂದ ಮಗುವನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಹೂಗುಚ್ಛ ನೀಡಿ ಸ್ವಾಗತಿಸಿ ತಮ್ಮ ಕುರ್ಚಿಯಲ್ಲಿ ಕೂರಿಸಿ ಕೆಲಕಾಲ “ಎಸ್ಪಿ” ಆಗುವ ಅವಕಾಶ ನೀಡಿದರು.
ಮಗು ನಗುಮುಖದಿಂದ ಕುರ್ಚಿಯಲ್ಲಿ ಕುಳಿತ ದೃಶ್ಯ ಕಂಡು ಸಿಬ್ಬಂದಿ ಭಾವುಕರಾದರು. ಎಸ್ಪಿ ಅವರ ಮಾನವೀಯ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.



