ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಬಳಗಾನೂರ ಶ್ರೀ ಶರಣರ ಮಠದಲ್ಲಿ ಮಹಾತ್ಮರ ಜೀವನ-ದರ್ಶನ ಪ್ರವಚನ ಪ್ರಾರಂಭೋತ್ಸವ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಡ್ನೂರ-ರಾಜೂರ-ಗದಗ ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯನ ಜೀವನದ ಕೊನೆಯ ಹಂತವೇ ಮರಣವಾಗಿದೆ. ಅವನ ಸಾವಿನ ಜೊತೆಗೆ ಯಾವುದೂ ಬರುವುದಿಲ್ಲ. ಅವನ ದೇಹತ್ಯಾಗದ ನಂತರ ಅವನ ಸನ್ನಡತೆ, ಸದಾಚಾರ, ಪರೋಪಕಾರ, ದಾನ, ಧರ್ಮ ಮಾರ್ಗದ ಬದುಕಿನ ಮೌಲ್ಯಗಳು ಉಳಿಯುತ್ತವೆ. ಆ ದಿಶೆಯಲ್ಲಿ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸರ್ವರಲ್ಲಿ ಸಮಾನತೆ, ಸಮನ್ವಯತೆ ಬೆಳೆಸಿಕೊಂಡು ಆರೋಗ್ಯಕರ ಜೀವನ ನಿರ್ವಹಿಸಬೇಕೆಂದರು.
ನಿವೃತ್ತ ಉಪನಿರ್ದೇಶಕ ಡಿ.ಐ. ಅಸುಂಡಿ ಮಾತನಾಡಿ, ಶ್ರೀ ಚನ್ನವೀರ ಶರಣರ ಪ್ರಭಾವ ಹಾಗೂ ಅವರ ಒಡನಾಟವನ್ನು ಸ್ಮರಿಸಿದರು. ಬಳೂಟಿಗಿಯ ಸಿದ್ದಯ್ಯ ಶಾಸ್ತ್ರಿಗಳಿಂದ ಪ್ರವಚನ ಸೇವೆ ಜರುಗಿತು. ಮುತ್ತು ಗದಗ, ಶರಣು ಕೆ. ಹಿರೇಮಠ, ಸೋಮನಾಳ ಇವರಿಂದ ಸಂಗೀತಸೇವೆ ಜರುಗಿತು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಿ.ಐ. ಅಸುಂಡಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸವಡಿ ಗ್ರಾಮದ ಎಂ.ಬಿ. ಪರಡ್ಡಿ ಕುಟುಂಬ ವರ್ಗದವರಿಂದ ಹಾಗೂ ಸವಡಿ ಗ್ರಾಮದ ಸಮಸ್ತ ಸದ್ಭಕ್ತರಿಂದ ಶ್ರೀ ಶಿವಶಾಂತವೀರ ಶರಣರ ತುಲಾಭಾರದ ಭಕ್ತಿಸೇವೆ ಜರುಗಿತು. ಬಳಗಾನೂರಿನ ವೇದಾ ಶ್ರೀಧರ ಬಡಿಗೇರ, ವಿರಾಜ್ ಶ್ರೀಧರ ಬಡಿಗೇರ ಇವರ ನಾಣ್ಯ ತುಲಾಭಾರ ಹಾಗೂ ತೆಂಗಿನಕಾಯಿ ತುಲಾಭಾರದ ಭಕ್ತಿಸೇವೆಯ ಹಮ್ಮಿನಿಯನ್ನು ಶ್ರೀಶರಣರಿಗೆ ಸಮರ್ಪಿಸಿದರು.
ಸವಡಿಯ ಶ್ರೀಕಾಳಿಕಾ ಭಜನಾ ಸಂಘದವರು ಭಜನಾ ಪದಗಳನ್ನು ಪ್ರಸ್ತುತಪಡಿಸಿದರು. ತಾ.ಪಂ ಮಾಜಿ ಅಧ್ಯಕ್ಷ ವಿ.ಎಸ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಪುರಾಣಿಕಮಠ ಸ್ವಾಗತಿಸಿದರು. ಪ್ರಾ. ಪ್ರಕಾಶ ಬರದೂರ, ಶಿವಲಿಂಗಶಾಸ್ತ್ರಿ ಸಿದ್ದಾಪೂರ ನಿರೂಪಿಸಿದರು. ಬಿ.ವಾಯ್. ಡೊಳ್ಳಿನ ವಂದಿಸಿದರು.
ನೇತೃತ್ವ ವಹಿಸಿದ್ದ ಶ್ರೀ ಶಿವಶಾಂತವೀರ ಶರಣರು ಮಾತನಾಡಿ, ಮನುಷ್ಯ ಜನ್ಮ ಶ್ರೇಷ್ಠವಾದದ್ದು. ಮನುಷ್ಯ ಮಹಾತ್ಮರ, ದಾರ್ಶನಿಕರ ದಾರಿಯಲ್ಲಿ ಸಾಗಿ ನಮ್ಮಲ್ಲಿಯ ಅಜ್ಞಾನ ದೂರೀಕರಿಸಿ ಸುಜ್ಞಾನದ ಬೆಳಕನ್ನು ಹೊಂದುವುದೇ ಸತ್ಸಂಗದ ಉದ್ದೇಶವಾಗಿದೆ. ಶರಣರ ಪುಣ್ಯಸ್ಮರಣೆ, ಶ್ರೀಮಠದ ಜಾತ್ರೆ ಎನ್ನುವುದು ನೆಪ ಮಾತ್ರ. ಅದರಡಿಯಲ್ಲಿ ಆಧ್ಯಾತ್ಮಿಕ ಶರಣರ ಸಂದೇಶಗಳನ್ನು ಜನರಲ್ಲಿ ತರುವುದಾಗಿದೆ ಎಂದರು.



