ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನೀವು ಕಾಲೇಜಿಗೆ ಬರುತ್ತಿರುವುದು ಅಧ್ಯಯನ ಮಾಡಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು. ನಿಮ್ಮ ಗುರಿ ಅದಷ್ಟೇ ಆಗಿರಬೇಕೇ ಹೊರತು ಅನ್ಯ ಕಾರ್ಯಗಳತ್ತ ನಿಮ್ಮ ಮನಸ್ಸನ್ನು ಹರಿಬಿಟ್ಟರೆ ನೀವು ಜೀವನದಲ್ಲಿ ಖಂಡಿತ ಸೋಲುತ್ತೀರಿ. ನೀವೆಂದಿಗೂ ಜೀವನದಲ್ಲಿ ಸೋಲಬಾರದೆಂದು ನರೇಗಲ್ಲ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಹೊಸ ಕಾನೂನುಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಮ್ಮ ತಂದೆ-ತಾಯಿ ನಿಮ್ಮ ಭವಿಷ್ಯದ ಬಗ್ಗೆ ಅದೆಷ್ಟೋ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅದಕ್ಕಾಗಿ ಅವರು ತಮ್ಮ ಜೀವನವನ್ನೇ ಒತ್ತೆ ಇಟ್ಟಿರುತ್ತಾರೆ. ನಮ್ಮ ಮಗ-ಮಗಳು ವಿದ್ಯಾಭ್ಯಾಸ ಕಲಿತು ದೊಡ್ಡ ನೌಕರಿ ಮಾಡುತ್ತಾರೆ, ಇದರಿಂದ ನಮ್ಮ ಬಾಳು ಬಂಗಾರವಾಗುತ್ತದೆ, ನಮ್ಮ ಬಡತನದ ಬದುಕು ದೂರಾಗುತ್ತದೆ ಎಂದು ನಂಬಿರುತ್ತಾರೆ. ಅಂತಹ ಸಮಯದಲ್ಲಿ ನೀವು ಪ್ರೀತಿ-ಪ್ರೇಮ ಎಂದೋ, ದುಶ್ಚಟಗಳಿಗೆ ಬಲಿಯಾಗಿಯೋ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದಷ್ಟೇ ಅಲ್ಲ, ನರಕವನ್ನಾಗಿಸಿಕೊಳ್ಳುತ್ತಿರುವುದನ್ನು ಅನೇಕ ಸಂದರ್ಭಗಳಲ್ಲಿ ನಾವು ಕಾಣುತ್ತೇವೆ. ಆದ್ದರಿಂದ ನಿಮ್ಮ ಜೀವನದ ಗುರಿಯನ್ನು ಸಾಧಿಸಲು, ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಲು ಶ್ರದ್ಧೆಯಿಂದ ಪ್ರಯತ್ನಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಅವರು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಅಧ್ಯಕ್ಷತೆ ವಹಿಸಿದ್ದರು.