ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇತ್ತೀಚೆಗೆ 31 ಶಾಸಕರು ಸಚಿವ ಸಂಪುಟ ಪುನಾರಚನೆಗೆ ಒತ್ತಾಯಿಸಿ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದ ಬೆನ್ನಲ್ಲೇ, ಇದೀಗ 24 ಮಂದಿ ವಿಧಾನ ಪರಿಷತ್ ಸದಸ್ಯರು (ಎಂಎಲ್ಸಿಗಳು) ಸಹ ಪತ್ರ ಬರೆದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ ಎಂಎಲ್ಸಿಗಳು, ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಮನವಿ ಸಲ್ಲಿಸಿದರು. 24 ಮಂದಿ ಸಹಿ ಮಾಡಿದ ಪತ್ರವನ್ನು ಖರ್ಗೆ ಅವರಿಗೆ ನೀಡಲಾಗಿದೆ.
ಸಂಪುಟದಲ್ಲಿ ಎಂಎಲ್ಸಿಗಳಿಗೆ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾನತೆ ಹಾಗೂ ನಿರುತ್ಸಾಹ ಭಾವನೆ ಉಂಟುಮಾಡುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಎಂಎಲ್ಸಿಗಳಿಗೆ ರಾಜಕೀಯ ಭವಿಷ್ಯ ಇಲ್ಲ ಎಂಬ ಭಾವನೆ ಮೂಡಬಹುದು ಎಂದು ತಿಳಿಸಿದ್ದಾರೆ.
ಸಮರ್ಥ ನಾಯಕರು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ವಿಧಾನಸಭಾ ಟಿಕೆಟ್ ಪಡೆಯಲು ಮುಂದಾಗುವ ಸಾಧ್ಯತೆ ಇದೆ. ಇದರಿಂದ ಗುಂಪುಗಾರಿಕೆ ಹೆಚ್ಚಾಗಿ ಪಕ್ಷದ ಸಂಘಟನೆಯನ್ನು ದುರ್ಬಲಗೊಳಿಸಬಹುದು ಎಂದು ಎಚ್ಚರಿಸಲಾಗಿದೆ.
ವಿಧಾನ ಪರಿಷತ್ತಿನ ಕನಿಷ್ಠ ಐದು ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಬೇಕು ಎಂದು ಎಂಎಲ್ಸಿಗಳು ಒತ್ತಾಯಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರದಿಂದ ಒಬ್ಬರು, ಕೆಳಮನೆ ಅಥವಾ ನಾಮನಿರ್ದೇಶಿತ ವರ್ಗದಿಂದ ಒಬ್ಬರನ್ನು ಆಯ್ಕೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.



