ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆ ಜೊತೆಗೆ ಕಳ್ಳತನ ಪ್ರಕರಣ ತಡೆಗೆ ಬಿಗಿ ಪೊಲೀಸ್ ವ್ಯವಸ್ಥೆ ಜಾರಿ ಮಾಡಿ ಆಯಕಟ್ಟಿನ ಸ್ಥಳಗಳಲ್ಲಿ ನಾಕಾಬಂದಿ ಹಾಕಲಾಗಿದೆ ಎಂದು ಗದಗ ಡಿಎಸ್‌ಪಿ ಜಡ್.ಎಚ್. ಇನಾಮದಾರ ಹೇಳಿದರು.
ಅವರು ಶನಿವಾರ (ತಡರಾತ್ರಿ) ಶಿರಹಟ್ಟಿ ಪಟ್ಟಣಕ್ಕೆ ಭೇಟಿ ನೀಡಿ ಪೊಲೀಸ್ ವ್ಯವಸ್ಥೆಯ ಪರಿಶೀಲನೆ ನಡೆಸಿ ಮಾತನಾಡಿದರು.
ನಾಕಾಬಂದಿಗಳಲ್ಲಿ ಸಂಶಯಾಸ್ಪದವಾಗಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಅನಾವಶ್ಯಕವಾಗಿ ಸಂಚರಿಸುವವರ ಮೇಲೂ ನಿಗಾ ವಹಿಸಲಾಗುವುದು. ಸಾರ್ವಜನಿಕರು ರಾತ್ರಿ ಸಮಯದಲ್ಲಿ ಅನಾವಶ್ಯಕವಾಗಿ ಹೊರಗಡೆ ಸಂಚರಿಸಬಾರದು. ಸರಕಾರದ ನಿಯಮಾನುಸಾರ ನಿಗದಿತ ಸಮಯಕ್ಕೆ ಅಂಗಡಿಗಳನ್ನು ಬಂದ್ ಮಾಡಬೇಕು. ಪೊಲೀಸ್ ಬೀಟ್‌ನಲ್ಲಿ ಹಲವಾರು ಸುಧಾರಿತ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಅಧಿಕಾರಿಗಳು ಸಹ ರಾತ್ರಿ ಸಮಯದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಎಂದಿನಂತೆ ಇಲಾಖೆಗೆ ಸಹಕಾರ ನೀಡಬೇಕೆಂದು ಹೇಳಿದರು.
ಶಿರಹಟ್ಟಿ ಸಿಪಿಐ ನಾಗರಾಜ ಮಾಢಳ್ಳಿ ಮಾತನಾಡಿ, ಶಿರಹಟ್ಟಿ-ಲಕ್ಮೇಶ್ವರ ತಾಲೂಕುಗಳು ಸೇರಿದಂತೆ ಠಾಣಾ ವ್ಯಾಪ್ತಿಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದಕ್ಕೆ ಅಗತ್ಯ ಕ್ರಮ ಕೈಕೊಳ್ಳಲಾಗಿದ್ದು, ಕಳ್ಳತನ ಪ್ರಕರಣ ತಡೆಗೆ ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.
ಪಿಎಸ್‌ಐ ಚನ್ನಯ್ಯ ದೇವೂರ ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.