ಮೈಸೂರು:- ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದ ಮಹಿಳಾ ಅಧಿಕಾರಿಯೊಬ್ಬರು ಭಾರೀ ಹೈಡ್ರಾಮಾ ನಡೆಸಿದ್ದಾರೆ.
ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾ.ಪಂ. ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು, ಬಂಧನದಿಂದ ತಪ್ಪಿಸಿಕೊಳ್ಳಲು ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡಿದ ಘಟನೆ ಜರುಗಿದೆ.
ಎಸ್, ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿದ್ದ ಸ್ವಾಮಿ ಎಂಬುವವರು ಸಾವನ್ನಪ್ಪಿದ ಬಳಿಕ, ಅವರ ಪುತ್ರ ಮಹದೇವ್ ಅವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು. ಮೃತ ಸ್ವಾಮಿ ಅವರ ಎರಡು ವರ್ಷದ ಬಾಕಿ ಸಂಬಳ ಸುಮಾರು 4 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಪಿಡಿಒ ಮಂಜುಳಾ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲಂಚ ನೀಡಲು ಇಚ್ಛಿಸದ ಮಹದೇವ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಕಚೇರಿಯಲ್ಲಿ ಮುಂಗಡವಾಗಿ 25 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಕಂಗಾಲಾದ ಮಂಜುಳಾ, ಕಚೇರಿಯಲ್ಲೇ ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ರಾದ್ಧಾಂತ ಮಾಡಿದ್ದಾರೆ. ಅಧಿಕಾರಿಗಳ ಮುಂದೆಯೇ ಹೈಡ್ರಾಮಾ ಸೃಷ್ಟಿಸಿ ತನಿಖೆಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಗಾಯಗೊಂಡ ಪಿಡಿಒ ಮಂಜುಳಾ ಅವರನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚೇತರಿಕೆ ಬಳಿಕ ತನಿಖೆ ಕೈಗೊಂಡಿದ್ದಾರೆ.



