ಬೆಂಗಳೂರು:- ರಾಜಧಾನಿ ಬೆಂಗಳೂರಿನ ವಿವೇಕನಗರ ಪೊಲೀಸರ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿಬಂದಿದ್ದು, ಇನ್ಸ್ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರ ವಿರುದ್ದ FIR ದಾಖಲಾಗಿದೆ.
ಕಸ್ಟಡಿಯಲ್ಲಿದ್ದ ವ್ಯಕ್ತಿ ಮೇಲೆ ಗಂಭೀರ ಹಲ್ಲೆ ಮಾಡಿದ ಪರಿಣಾಮ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮೃತ ಯುವಕನನ್ನು ದರ್ಶನ್ ಎಂದು ಗುರುತಿಸಲಾಗಿದೆ. ನವೆಂಬರ್ 15ರಂದು ಮೃತ ದರ್ಶನ್, ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ್ದ ಪೊಲೀಸರಿಗೆ ಮಚ್ಚು ತೋರಿಸಿದ್ದ ಎನ್ನಲಾಗಿದೆ. ಅದೇ ಕಾರಣಕ್ಕೆ ಆತನ ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದರು. ಈ ವೇಳೆ ಯಾವುದೇ ಕೇಸ್ ಮಾಡದೆ, ಎರಡು ದಿನ ಕಸ್ಟಡಿಯಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.
ಎರಡು ದಿನಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಿದ ಬಳಿಕ ನೆಲಮಂಗಲದ ಯುನಿಟಿ ಸೋಷಿಯಲ್ ಸರ್ವಿಸ್ಗೆ ಪೊಲೀಸರು ಕರೆ ಮಾಡಿದ್ದಾರೆ. ಲಾಕಪ್ನಲ್ಲಿದ್ದ ದರ್ಶನನ್ನ ರಿಹ್ಯಾಬ್ ಸೆಂಟರ್ಗೆ ಸೇರಿಸಿದ್ದಾರೆ. ರಿಹ್ಯಾಬ್ ಸೆಂಟರ್ನಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾನೆ.
ಮೊನ್ನೆ ದರ್ಶನ್ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ವೇಳೆ ಹಲ್ಲೆ ನಡೆದಿರೋದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭವಾಗಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವೇಕನಗರ ಇನ್ಸ್ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರ ಮೇಲೆ FIR ಆಗಿದೆ.


