ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ರಘುನಂದನ್ ಮೂರ್ತಿ

0
Lok Sabha General Election Vote Counting
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ : ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಇದೇ ಜೂನ್ 4ರ ಬೆಳಿಗ್ಗೆ 8 ಗಂಟೆಯಿಂದ ದೇವಗಿರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭಗೊಳ್ಳಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.
ಮತ ಎಣಿಕೆ ಸಿದ್ಧತೆ ಕುರಿತಂತೆ ಶನಿವಾರ ಮತ ಎಣಿಕೆ ಜರುಗುವ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ  ಸ್ಥಾಪಿಸಲಾದ ಮಾಧ್ಯಮಕೇಂದ್ರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಾವೇರಿ ಲೋಕಸಭಾ ಕ್ಷೇತ್ರದ ಹಾವೇರಿ ಜಿಲ್ಲೆಯ ಐದು ಹಾಗೂ ಗದುಗಿನ ಮೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ತಲಾ ಒಂದೊಂದು ಕೊಠಡಿ ಹಾಗೂ ಇ.ವಿ.ಎಂ ಮತ ಎಣಿಕೆಗೆ ಹಾಗೂ ಅಂಚೆ ಮತಪತ್ರ ಎಣಿಕೆ ತಲಾ ಒಂದು ಕೊಠಡಿಯನ್ನು ನಿಗದಿಪಡಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಮತದಾನ ವಿವರ: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 9,02,119 ಪುರುಷ, 8,90,572 ಮಹಿಳಾ ಹಾಗೂ ಇತರೆ 83 ಮತದಾರರು ಸೇರಿ 17,92,774 ಮತದಾರರ ಪೈಕಿ 7,13,613 ಪುರುಷು ಹಾಗೂ 6,77,577 ಹಾಗೂ ಇತರೆ 24 ಮತದಾರರು ಸೇರಿ 13,91,214 ಜನ ಮತದಾರರು ಮತದಾನ ಮಾಡಿದ್ದು, ಶೇ.77.60ರಷ್ಟು ಮತದಾನವಾಗಿದೆ.
ಮತ ಎಣಿಕೆ ಸುತ್ತ್ತು: ಶಿರಹಟ್ಟಿ-18, ಗದಗ-16, ರೋಣ-20, ಹಾನಗಲ್-18, ಹಾವೇರಿ-19, ಬ್ಯಾಡಗಿ-18, ಹಿರೇಕೆರೂರು-17 ಹಾಗೂ ರಾಣೇಬೆನ್ನೂರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 19 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಆಯ್ದ ಐದು ಮತಗಟ್ಟೆಗಳ ವಿವಿ ಪ್ಯಾಟ್‌ಗಳ ಮತ ಎಣಿಕೆ ನಡೆಸಲಾಗುವುದು ಎಂದು ತಿಳಿಸಿದರು.
ಮತ ಎಣಿಕೆ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು, ಎಣಿಕೆ ಕಾರ್ಯಕ್ಕಾಗಿ ಮತ ಎಣಿಕೆ ಮೇಲ್ವಿಚಾರಕರನ್ನು, ಎಣಿಕೆ ಸಹಾಯಕರನ್ನು ಹಾಗೂ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಟ್ಯಾಬುಲೇಷನ್, ಸ್ಟ್ರಾಂಗ್ ರೂಂ ಸಿಬ್ಬಂದಿ ಒಳಗೊಂಡಂತೆ ಮತ ಎಣಿಕೆ ಕಾರ್ಯಕ್ಕೆ ಒಟ್ಟಾರೆ 800 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮತಗಟ್ಟೆ ಅಧಿಕಾರಿಗಳು, ಎಣಿಕೆ ಸಿಬ್ಬಂದಿ, ಅಧಿಕಾರಿ, ಪೊಲೀಸ್, ರಾಜಕೀಯ ಪಕ್ಷಗಳ ಏಜೆಂಟರಿಗೆ ಪ್ರತ್ಯೇಕ 11 ಬಣ್ಣದ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶವಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಬೆಂಕಿಪೊಟ್ಟಣ, ನೀರಿನ ಬಾಟಲ್, ಚಾಕು, ಚೂಪಾದ ಆಯುಧ, ಅಗ್ನಿಜನ್ಯ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಆಗಮಿಸಲು ನಾಲ್ಕು ಪ್ರವೇಶ ದ್ವಾರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಮತ ಎಣಿಕೆ ಪ್ರಕ್ರಿಯೆ: ಜೂನ್ 4ರಂದು ಬೆಳಿಗ್ಗೆ 7ಕ್ಕೆ ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಎಣಿಕೆ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು. ಮತ ಯಂತ್ರಗಳನ್ನು ಎಣಿಕೆ ಕೊಠಡಿಗೆ ಸಾಗಿಸಲಾಗುವುದು. ಬೆಳಿಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ, ನಂತರ ಇ.ವಿ.ಎಂಗಳ ಎಣಿಕೆ ಪ್ರಾರಂಭಿಸಲಾಗುತ್ತದೆ. ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ಆಯ್ದ ಐದು ಮತಗಟ್ಟೆಗಳ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ  ಮಾಡಲು ಪ್ರಾರಂಭಿಸಲಾಗುತ್ತದೆ. ಪ್ರತಿ ಸುತ್ತಿನ ಒಟ್ಟು ಮತಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದರು.
ಏಜೆಂಟರ ನೇಮಕ: ಪ್ರತಿ ಮತ ಎಣಿಕೆ ಟೇಬಲ್‌ಗೆ ಅಭ್ಯರ್ಥಿಗಳು ಅಥವಾ ಆಯಾ ರಾಜಕೀಯ ಪಕ್ಷಗಳ ಏಜೆಂಟರ ನೇಮಕ್ಕೆ ಈಗಾಗಲೇ ತಿಳಿಸಲಾಗಿದೆ. ಏಜೆಂಟರು 18 ವರ್ಷ ಮೇಲ್ಪಟ್ಟರಾಗಿರಬೇಕು, ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಏಜೆಂಟರಾಗಿ ನೇಮಕ ಮಾಡಬಹುದು. ನಗರಸಭೆ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸದಸ್ಯರು ಏಜೆಂಟರಾಗಲು ಅವಕಾಶವಿಲ್ಲ ಎಂದು ತಿಳಿಸಿದರು.
ಮಾಧ್ಯಮದವರಿಗೆ ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ವಿವರ ನೀಡಲು ಸೂಕ್ತ ಕ್ರಮವಹಿಸಲಾಗಿದೆ. ಸ್ಟಾçಂಗ್ ರೂಂ ತೆರೆಯುವಾಗ ಹಾಗೂ ಮತ ಎಣಿಕೆ ಕೇಂದ್ರದ ಚಿತ್ರೀಕರಣಕ್ಕೆ ಅವಕಾಶವಿದ್ದು, ಮಾಧ್ಯಮ ಪ್ರತಿನಿಧಿಗಳು ಒಬ್ಬೊಬ್ಬರಾಗಿ ಆಗಮಿಸದೇ ಒಟ್ಟಾಗಿ ಆಗಮಿಸಿ ನಿಗದಿತ ಸಮಯದೊಳಗೆ ಚಿತ್ರೀಕರಿಸಿಕೊಳ್ಳಲು ಅವಕಾಶವಿದ್ದು, ಯಾವುದೇ ಕಾರಣಕ್ಕೂ ಸ್ಟ್ರಾಂಗ್ ರೂಂ ಒಳಗೆ ಹಾಗೂ ಎಣಿಕೆ ಕೇಂದ್ರದೊಳಗೆ ಪ್ರವೇಶವಿಲ್ಲ.
ಮಾಧ್ಯಮಗೋಷ್ಠಿಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಉಪಸ್ಥಿತರಿದ್ದರು.
ಭದ್ರತೆ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಮತ ಎಣಿಕೆ ಕೇಂದ್ರದ ಬಂದೋಬಸ್ತ್ಗಾಗಿ 4 ಜನ ಡಿ.ವೈ.ಎಸ್.ಪಿ., 11 ಜನ ಇನ್ಸಪೆಕ್ಟರ್, 26 ಜನ ಸಬ್ ಇನ್ಸಪೆಕ್ಟರ್, 2 ಕೆ.ಎಸ್.ಆರ್.ಪಿ ತುಕಡಿ, 5 ಡಿ.ಎ.ಆರ್ ತುಕಡಿ ಹಾಗೂ ಹೋಮ್‌ಗಾರ್ಡ್ ಮತ್ತು ಸಾಕಷ್ಟು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಾದ್ಯಂತ ಜೂನ್ 4ರಂದು 144 ಕಲಂ ಜಾರಿಗೊಳಿಸಲಾಗಿದೆ, ಮದ್ಯಪಾನ ಹಾಗೂ ಮದ್ಯಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.

Spread the love
Advertisement

LEAVE A REPLY

Please enter your comment!
Please enter your name here