ಬೆಂಗಳೂರು:- ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ ಆರೋಪದಡಿ ಶನಿವಾರ ಕರ್ನಾಟಕದ ಸುಮಾರು 33 ಕಡೆ ಲೋಕಾಯುಕ್ತ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದೆ. ಈ ವೇಳೆ ಭ್ರಷ್ಟ ಅಧಿಕಾರಿಗಳ, ಆಸ್ತಿ, ನಗದು ಕಂಡು ‘ಲೋಕಾ’ ಟೀಮ್ ದಂಗಾಗಿ ಹೋಗಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಉಡುಪಿ, ಗದಗ ಮತ್ತು ಧಾರವಾಡದಲ್ಲಿ 33 ಕಡೆ ಶನಿವಾರ ಲೋಕಾಯುಕ್ತ ದಾಳಿ ಮಾಡಿದ್ದರು. ಲೋಕಾಯುಕ್ತ ದಾಳಿಗೆ ಒಳಗಾಗಿರುವ ಈ ಅಧಿಕಾರಿಗಳು ಅದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ದಾಳಿಯಲ್ಲಿ ಅಪಾರ ಪ್ರಮಾಣದ ಸ್ಥಿರ ಹಾಗೂ ಚರಾಸ್ಥಿ ಪತ್ತೆಯಾಗಿದೆ. ಅಧಿಕಾರಿಗಳ ಮನೆ- ಕಚೇರಿ ಸೇರಿದಂತೆ ಒಟ್ಟು 33 ಕಡೆಗಳಲ್ಲಿ ದಾಳಿ ನಡೆಸಿ 24.47 ಕೋಟಿ ರೂ. ಚರ- ಸ್ಥಿರಾಸ್ತಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
6 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿ 33 ಕಡೆ ಏಕಕಾಲದಲ್ಲಿ ದಾಳಿ ಮಾಡಿ, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಹಣ, ಆಸ್ತಿ ಪತ್ರ, ಅತ್ಯಮೂಲ್ಯ ದಾಖಲೆ ಪತ್ರಗಳನ್ನು ಪತ್ತೆ ಹಚ್ಚಿದ್ದಾರೆ.
ಯಾರ್ಯಾರ ಮನೆಯಲ್ಲಿ ಸಿಕ್ಕಿದೆಷ್ಟು?
1. ದೇವರಾಜ್ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿದ್ಧಲಿಂಗಪ್ಪ ನಿಂಗಪ್ಪ ಬಾನಸಿಗೆ ಸೇರಿದ ಒಟ್ಟು ಮೂರು ಕಡೆಗಳಲ್ಲಿ ದಾಳಿ ನಡೆದಿದ್ದು, 4 ನಿವೇಶನ, ಒಂದು ವಾಸದ ಮನೆ, 36.64 ಲಕ್ಷ ಮೌಲ್ಯದ ಚಿನ್ನ, 10.60 ಲಕ್ಷ ಬೆಳೆಬಾಳುವ ವಾಹನಗಳು ಸೇರಿ 45.42 ಲಕ್ಷ ಮೌಲ್ಯದ ಚರಾಸ್ತಿ ಸೇರಿ ಒಟ್ಟು 1.48 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
2. ಶ್ರೀಶೈಲ್ ಸುಭಾಷ್ ತತ್ರಾನಿ: ಆಡಿಟ್ ಕಚೇರಿ ಬಾಗಲಕೋಟೆ…
ಶ್ರೀಶೈಲ ಗೆ ಸಂಬಂದಿಸಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, 3 ನಿವೇಶನ, 6 ವಾಸದ ಮನೆಗಳು, 6.38 ಎಕರೆ ಕೃಷಿ ಜಮೀನು ಪತ್ರಗಳು, 21 ಲಕ್ಷದ ಚಿನ್ನಾಭರಣ, 45.60 ಲಕ್ಷ ಮೌಲ್ಯದ ವಾಹನಗಳು ಸೇರಿ ಒಟ್ಟು 2.93 ಕೋಟಿ ಆಸ್ತಿ ಪತ್ತೆಯಾಗಿದೆ.
3. ಅಮೀನ್ ಮುಕ್ತರ್ ಅಹಮದ್: (ಅಧೀಕ್ಷಕ ಅಭಿಯಂತರ, ಲೋಕೋಪಯೋಗಿ ಇಲಾಖೆ, ಬಳ್ಳಾರಿ) ಅಮೀನ್ ಗೆ ಸೇರಿದ 5 ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, 31 ನಿವೇಶನ, 2 ವಾಸದ ಮನೆ, 5. 30 ಎಕರೆ ಕೃಷಿ ಜಮೀನು, 25.49 ಲಕ್ಷ ನಗದು, 79 ಲಕ್ಷದ ಚಿನ್ನ, 47.10 ಲಕ್ಷದ ಮೌಲ್ಯದ ವಾಹನಗಳು ಹಾಗೂ 10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 7.32 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
4. ರಾಮಕೃಷ್ಣ ಬಾಳಪ್ಪ ಗುಡಗೇರಿ(ಪಿಡಿಓ, ಬಾಡ ಗ್ರಾಮ ಪಂಚಾಯಿತಿ, ಶಿಗ್ಗಾವಿ ತಾಲೂಕು ಹಾವೇರಿ) 2 ನಿವೇಶನ, ಒಂದು ವಾಸದ ಮನೆ, 9.07 ಎಕರೆ ಕೃಷಿ ಜಮೀನು, 8.53 ಲಕ್ಷ ಬೆಲೆಯ ಚಿನ್ನ, 13.50 ಲಕ್ಷ ಮೌಲ್ಯದ ವಾಹನಗಳು,10 ಲಕ್ಷ ರೂ. ಬೆಲೆಬಾಳುವ ಗೃಹಪಯೋಗಿ ವಸ್ತುಗಳು ಸೇರಿ ಒಟ್ಟು 1.18 ಕೋಟಿ ಆಸ್ತಿ ಪತ್ತೆಯಾಗಿದೆ.
5. ಗಿರೀಶ್ ರಾವ್( ಲೆಕ್ಕಾಧಿಕಾರಿ, ಮೆಸ್ಕಾಂ, ಕಾರ್ಕಳ, ಉಡುಪಿ ಜಿಲ್ಲೆ)
ಗಿರೀಶ್ ಗೆ ಸಂಬಂದಿಸಿದ 5 ಕಡೆಗಳಲ್ಲಿ ದಾಳಿ ನಡೆದಿದ್ದು, 5 ನಿವೇಶನ, 1 ವಾಸದ ಮನೆ, 1 ವಾಣಿಜ್ಯ ಮಳಿಗೆ, 30.25 ಲಕ್ಷ ಮೌಲ್ಯದ ಚಿನ್ನ, 9.50 ಲಕ್ಷ ಬೆಲೆಯ ವಾಹನಗಳು, 1.24 ಲಕ್ಷ ಮೌಲ್ಯದ ಮೊಬೈಲ್ ಸೇರಿ ಒಟ್ಟು 2.89 ಕೋಟಿ ಆಸ್ತಿ ಪತ್ತೆಯಾಗಿದೆ.
6. ಗಂಗಾಧರ ವೀರಪ್ಪ ಶಿರೋಳ( ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ಗದಗ)
ಗಂಗಾಧರ್ ಗೆ ಸೇರಿದ ಒಟ್ಟು 7 ಕಡೆಗಳಲ್ಲಿ ದಾಳಿ ನಡೆದಿದ್ದು, 4 ನಿವೇಶನಗಳು, 7 ವಾಸದ ಮನೆಗಳು, 3.29 ಎಕರೆ ಕೃಷಿ ಜಮೀನು, 25 ಸಾವಿರ ನಗದು, 28.53 ಲಕ್ಷ ಚಿನ್ನ, ಬ್ಯಾಂಕ್ ಖಾತೆಯಲ್ಲಿ 21.25 ಲಕ್ಷ ನಗದು ಸೇರಿದಂತೆ ಒಟ್ಟು 3.34 ಕೋಟಿ ಆಸ್ತಿ ಪತ್ತೆಯಾಗಿದೆ.. 2 ನಿವೇಶನ, 2 ವಾಸದ ಮನೆ, 6 ವಾಣಿಜ್ಯ ಮಳಿಗೆ, 11.35 ಎಕರೆ ಕೃಷಿ ಜಮೀನು, 76,600 ಸಾವಿರ ರೂ.ನಗದು, 23.98 ಲಕ್ಷ ಮೌಲ್ಯದ ಚಿನ್ನ, 26 ಲಕ್ಷ ಬೆಲೆಯ ವಾಹನಗಳು, ಬ್ಯಾಂಕ್ ಖಾತೆಯಲ್ಲಿ 1.65 ಕೋಟಿ ನಗದು, 25 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿ 5.30 ಕೋಟಿ ಆಸ್ತಿ ಪತ್ತೆಯಾಗಿದೆ.