ಗದಗ: ರಾಜ್ಯದ ಹಲವೆಡೆ ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬುಧವಾರ ಲೋಕಾಯುಕ್ತ ಶಾಕ್ ಕೊಟ್ಟಿದ್ದು, ಬೆಂಗಳೂರು, ಗದಗ ಸೇರಿ ರಾಜ್ಯದ 8 ಕಡೆಗಳಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅದರಂತೆ ಗದಗ-ಬೆಟಗೇರಿ ನಗರಸಭೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್ಗೆ ಸೇರಿದ ಮನೆ ಮತ್ತು ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಹುಚ್ಚೇಶ್ ಬಂಡಿವಡ್ಡರ್ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್ಪಿ ಹನಮಂತರಾಯ್, ಡಿವೈಎಸ್ಪಿ ವಿಜಯ್ ಬಿರಾದಾರ್, ಪಿಎಸ್ಐ ಎಸ್ ಎಸ್ ತೇಲಿ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಈ ದಾಳಿ ಮಾಡಿತ್ತು.
ದಾಳಿ ವೇಳೆ ಹಲವು ಮಹತ್ತರ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಹೌದು, ಗದಗ ಬೆಟಗೇರಿ ನಗರಸಭೆ ಇಂಜಿನಿಯರ್ ಹುಚ್ಚೇಶ ಬಂಡಿವಡ್ಡರ ನಿವಾಸಗಳ ಮೇಲೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿದ ಲೋಕಾಯಕ್ತರಿಗೆ 1.50 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಬಂಡಿವಡ್ಡರ್ ಗೆ ಸಂಬಂಧಿಸಿದಂತೆ ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಒಟ್ಟು ಐದು ಕಡೆ ಏಕಕಾಲಕ್ಕೆ ದಾಳಿ ನಡೆಸಿ ಲೋಕಾಯುಕ್ತ ಟೀಂ ಪರಿಶೀಲನೆ ನಡೆಸಿದರು.
ಈ ವೇಳೆ, ಲೋಕಾಯುಕ್ತರಿಗೆ 2 ಮನೆ, 1 ನಿವೇಶನ, 1 ಜೆಸಿಬಿ, 1 ಕಾರ್, 1 ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಹಾಗೂ ಟ್ಯಾಂಕರ್ ಪತ್ತೆಯಾಗಿವೆ.
ಇದಷ್ಟೇ ಅಲ್ಲದೇ, ಗಜೇಂದ್ರಗಡ ಪಟ್ಟಣದಲ್ಲಿ, 22 ಲಕ್ಷ ಮೌಲ್ಯದ ಶಾಪಿಂಗ್ ಕಾಂಪ್ಲೆಕ್ಸ್, 17 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಸೇರಿದಂತೆ ಬ್ಯಾಂಕಿನಲ್ಲಿ 22 ಲಕ್ಷ ನಗದು ಸೇರಿ, ಒಟ್ಟು 1.50 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಹಲವು ದಾಖಲೆಗಳು ಸಿಕ್ಕಿವೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಕರ್ನಾಟಕ ಲೋಕಾಯುಕ್ತ ಗದಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ನಗರಸಭೆ ಇಂಜಿನಿಯರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದ ಬೆನ್ನಲ್ಲೇ ಇದೀಗ ನಗರಸಬೆ ಇನ್ನುಳಿದ ಅಧಿಕಾರಿಗಳಿಗೂ ನಡುಕು ಶುರುವಾಗಿದೆ. ದಾಳಿ ಮಾಹಿತಿಯಿಂದ ಬುಧವಾರ ನಗರಸಭೆ ಬಿಕೋ ಎನ್ನುತ್ತಿತ್ತು. ಹಲವು ಅಧಿಕಾರಿಗಳು ಕಚೇರಿಯತ್ತ ಮುಖ ಮಾಡಿರಲಿಲ್ಲ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಯಿತು.