ಬೆಂಗಳೂರು:- ಇಂದು ಬೆಳ್ಳಂಬೆಳ್ಳಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಆದಾಯಕ್ಕಿಂತ ಹೆಚ್ಚು ಆದಾಯ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 10 ಕಡೆಗಳಲ್ಲಿ ಏಕಕಾಲದಲ್ಲಿ ಹಲವು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು, ಪರಿಶೀಲನೆ ಮಾಡಿದ್ದಾರೆ.
ಗದಗದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ:
ಪಶುಸಂಗೋಪನೆ ಇಲಾಖೆಯ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಪಶುವೈದ್ಯಕೀಯ ಹಿರಿಯ ಪರೀಕ್ಷಕ ಸತೀಶ್ ಕಟ್ಟಿಮನಿ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ.
ಬೆಟಗೇರಿ ಟೌನ್‌ಶಿಪ್ ಪ್ರದೇಶದಲ್ಲಿರುವ ಅವರ ಮನೆಯಲ್ಲಿ, ಕಚೇರಿಯಲ್ಲಿ ಹಾಗೂ ಅವರಿಗೆ ಸೇರಿದ ಇನ್ನೂ ಐದು ಜಾಗಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿರುವ ಮಾಹಿತಿ ಲಭಿಸಿದೆ. ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಪಶು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸತೀಶ್ ಕಟ್ಟಿಮನಿ ಆದಾಯಕ್ಕಿಂತ ಹೆಚ್ಚು ಆಸ್ತಿಗಳನ್ನು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ್ ನೇತೃತ್ವದಲ್ಲಿ ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರದ ಲೋಕಾಯುಕ್ತ ತಂಡಗಳು ಭಾಗಿಯಾಗಿ ದಾಖಲೆಗಳು ಹಾಗೂ ಸಂಬಂಧಿತ ದಾಖಲೆಪತ್ರಗಳನ್ನು ಪರಿಶೀಲಿಸಿದ್ದಾರೆ.
ಹಾವೇರಿಯಲ್ಲಿ ದಾಳಿ:-
ಹಾವೇರಿಯಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ದಾಳಿ ನಡೆಸಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಶೇಖಪ್ಪ ಸಣ್ಣಪ್ಪ ಮತ್ತಿಕಟ್ಟಿ ಅವರ ಮನೆಯಲ್ಲಿ ಪರಿಶೀಲಿಸಿದ್ದಾರೆ.
ಆದಾಯಕ್ಕಿಂತ 207% ಹೆಚ್ಚುವರಿ ಅಕ್ರಮ ಸಂಪತ್ತು ಹೊಂದಿರುವ ಆರೋಪ ಎದುರಿಸುತ್ತಿರುವ ಶೇಖಪ್ಪನ ಮನೆಗಳು, ವಾಣಿಜ್ಯ ಸಂಕೀರ್ಣ ಸೇರಿದಂತೆ ಒಟ್ಟು 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶೇಖಪ್ಪ ಹಾಗೂ ಸಂಬಂಧಿಕರ ಹೆಸರಿನಲ್ಲಿದ್ದ 17 ನಿವೇಶನಗಳು, ಒಂದು ವಾಣಿಜ್ಯ ಕಟ್ಟಡ ಮತ್ತು ಎರಡು ವಸತಿ ಕಟ್ಟಡಗಳನ್ನು ಸೇರಿಸಿ ಅಕ್ರಮ ಆಸ್ತಿಗಳ ಮೌಲ್ಯ ಸುಮಾರು ₹3,46,68,587 ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಅಕ್ಷಯ ಪಾರ್ಕ್‌ನಲ್ಲಿ ಸುಮಾರು 3 ಗುಂಟೆ 8 ಅಣೆ ವಿಸ್ತೀರ್ಣದ ಕಮರ್ಷಿಯಲ್ ಕಾಂಪ್ಲೆಕ್ಸ್, ಬೈರಿದೇವರಿಕೊಪ್ಪ ಗ್ರಾಮದಲ್ಲಿ ಎರಡು ಅಂತಸ್ತಿನ ಆರ್‌ಸಿಸಿ ಮನೆ, ದಾವಣಗೆರೆಯಲ್ಲಿ ಆರ್‌ಸಿಸಿ ಮನೆಯನ್ನು ಸೇರಿ ಹಲವು ಕಡೆ ಅಕ್ರಮ ಹಣದಲ್ಲಿ ಆಸ್ತಿ ಖರೀದಿಸಿರುವುದು ಬೆಳಕಿಗೆ ಬಂದಿದೆ.
ದಾವಣಗೆರೆಯಲ್ಲಿ ಲೋಕಾಯುಕ್ತ ದಾಳಿ:-
ದಾವಣಗೆರೆಯಲ್ಲಿ ಲೋಕಾ ಅಧಿಕಾರಿಗಳು ಬೆಳಗ್ಗೆ ಭರ್ಜರಿ ದಾಳಿ ನಡೆಸಿದ್ದಾರೆ. ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು ಜೆ ಅವರ ಮನೆ, ಕಚೇರಿ ಮತ್ತು ಸಂಬಂಧಿಕರ ಮನೆಗಳನ್ನು ಗುರಿಯಾಗಿಸಿದ್ದ ಈ ಕಾರ್ಯಾಚರಣೆಯನ್ನು ದಾವಣಗೆರೆ ಜಿಲ್ಲಾ-ಲೋಕಾಯುಕ್ತ ಎಸ್ಪಿ ಎಂ. ಎಸ್. ಕೌಲಾಪೂರೆ ನೇತೃತ್ವದಲ್ಲಿ ನಡೆಸಲಾಗಿದೆ.
ಡಿಎಸ್ಪಿ ಕಲಾವತಿ ಮತ್ತು ಇನ್ಸ್ಪೆಕ್ಟರ್ ಗುರು ಬಸವರಾಜ್ ಅವರು ತನಿಖಾ ತಂಡದ ಭಾಗವಾಗಿದ್ದರು. ಕೃಷಿ-ಮಾರಾಟ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಭು ಜೆ ಅವರ ದಾವಣಗೆರೆ ನಗರದ ಆಂಜನೇಯ ಬಡಾವಣೆಯ 12ನೇ ಕ್ರಾಸ್ ನಲ್ಲಿರುವ ಮನೆಯಲ್ಲಿ ಇಂಚಿಂಚೂ ಮಾಹಿತಿ ಕಲೆ ಹಾಕಿದ್ದಾರೆ.
ಕೊಡಗಿನಲ್ಲೂ ದಾಳಿ:
ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ದೂರಿನ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಡಿಕೇರಿ ಕಾನ್ವೆಂಟ್ ಜಂಕ್ಷನ್ ಬಳಿ ಇರುವ ಲೋಕೋಪಯೋಗಿ ಕಚೇರಿ ಸೇರಿದಂತೆ ಮಡಿಕೇರಿ, ಕುಶಾಲನಗರ ಮತ್ತು ಮೈಸೂರಿನಲ್ಲಿರುವ ಗಿರೀಶ್ ಅವರಿಗೆ ಸೇರಿದ ಮನೆಗಳ ಮೇಲೆ ಅಧಿಕಾರಿಗಳು ಏಕಕಾಲದಲ್ಲಿ ತಪಾಸಣೆ ನಡೆಸಿದ್ದಾರೆ. ಮೈಸೂರಿನಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ದಿನಕರ್ ಶೆಟ್ಟಿ ಅವರ ನೇತೃತ್ವದಲ್ಲಿ, ಹಾಗೂ ಮಡಿಕೇರಿಯಲ್ಲಿ ಲೋಕಾಯುಕ್ತ ಸಬ್ ಇನ್ಸ್‌ಪೆಕ್ಟರ್ ವೀಣಾ ನಾಯ್ಕ್ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆಗಳು ಹಾಗೂ ಆಸ್ತಿ ಸಂಬಂಧಿತ ಮಾಹಿತಿಗಳನ್ನು ಪರಿಶೀಲಿಸುವ ಕಾರ್ಯ ಜರಗಿದೆ.
ಬೀದರ್ ನಲ್ಲೂ ಲೋಕಾ ದಾಳಿ:
ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರೇಮ್‌ಸಿಂಗ್ ರಾಥೋಡ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ಬೀದರ್‌ನ ಶಿವನಗರದಲ್ಲಿರುವ ಅವರ ನಿವಾಸದ ಮೇಲೆ ಶೋಧ ಕಾರ್ಯ ಜರುಗಿದರೆ, ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಭೀಮರಾಯನ ಗುಡಿಯಲ್ಲಿರುವ ಕಚೇರಿ ಮತ್ತು ನಿವಾಸಗಳ ಮೇಲೂ ದಾಳಿ ನಡೆದಿದೆ. ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದ ನಿವಾಸಿಯಾಗಿರುವ ಪ್ರೇಮ್‌ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲೆಗಳ ಪರಿಶೀಲನೆ ಲೋಕಾಯುಕ್ತ ಡಿವೈಎಸ್‌ಪಿ ಹನುಮಂತ ರಾಯ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಶಹಾಪೂರದ ಭೀಮರಾಯನ ಗುಡಿ ವೃತ್ತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಯ ಅಕ್ರಮ ಆಸ್ತಿ ಸಂಬಂಧಿತ ದಾಖಲಾತಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.


