ಬೆಂಗಳೂರು:– ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಬಾಗಲಕೋಟೆ ಹಾಗೂ ರಾಯಚೂರಿನ ಕೆಲ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು.
ಈ ಸಂಬಂಧ ಇಂದು ಬೆಳಗ್ಗೆಯೇ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಅನೇಕ ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚು ಗಳಿಕೆ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ರಾಯಚೂರು ನಗರದ ದೇವರ ಕಾಲೋನಿಯಲ್ಲಿರುವ ಜಿಲ್ಲಾ ಪಂಚಾಯತಿ ಲೆಕ್ಕಪತ್ರ ಸಹಾಯಕ ಅಧಿಕಾರಿ ನರಸಿಂಗ್ ರಾವ್ ಗುಜ್ಜರ್ ಮನೆ ಮೇಲೆ ದಾಳಿ ಮಾಡಲಾಗಿದೆ. ಇವರು ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿರುವ ದೂರು ಬಂದಿದ್ದರಿಂದ ಈ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆಯ ವಿದ್ಯಾಗಿರಿಯ 22ನೇ ಕ್ರಾಸ್ ನಲ್ಲಿರುವ ಪಿಡಿಓ ಬಿ.ಎಸ್ ಹಿರೇಮಠ ಮನೆ ಮೇಲೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದ ಪಿಡಿಓ ಆಗಿರುವ ಹಿರೇಮಠ ಆದಾಯಕ್ಕಿಂತ ಹೆಚ್ಚು ಹಣ ಗಳಿಸಿದ್ದಾರೆ ಎಂದು ದೂರು ಬಂದಿದೆ. ಸದ್ಯ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.